ನವದೆಹಲಿ, ಆ. 26 (DaijiworldNews/MB) : ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿರುವ ವಕೀಲ ಪ್ರಶಾಂತ್ ಭೂಷಣ್ "ತಾನು ಕ್ಷಮೆಕೋರುವುದಿಲ್ಲ" ಎಂದು ಹೇಳಿದ್ದು ಇದೀಗ ಸುಪ್ರೀಂ ಕೋರ್ಟ್, ''ಕ್ಷಮೆಯಾಚಿಸುವುದರಲ್ಲಿ ತಪ್ಪೇನಿದೆ, ಅದು ಪಾಪವೇ'' ಎಂದು ಪ್ರಶಾಂತ್ ಭೂಷಣ್ ಅವರನ್ನು ಪ್ರಶ್ನಿಸಿದೆ.
ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಪ್ರಕರಣದ ಆರೋಪ ಸಾಬೀತಾದ ಹಿನ್ನೆಲೆ ಮಂಗಳವಾರ ನ್ಯಾಯಾಧೀಶರಾದ ಅರುಣ್ ಮಿಶ್ರಾ, ಬಿ.ಆರ್. ಗವಾಯಿ ಹಾಗೂ ಕೃಷ್ಣ ಮುರಾರಿ ಅವರನ್ನು ಒಳಗೊಂಡ ತ್ರಿ ಸದಸ್ಯ ಪೀಠ ಶಿಕ್ಷೆ ಪ್ರಮಾಣ ಪ್ರಕಟಿಸುವ ಬಗ್ಗೆ ವಿಚಾರಣೆ ನಡೆಸಿದ್ದು ಶಿಕ್ಷೆಯ ಪ್ರಮಾಣ ಘೋಷಣೆ ಮಾಡುವ ಅಂತಿಮ ವಿಚಾರಣೆಯನ್ನು ಸೆ.10ಕ್ಕೆ ಕಾಯ್ದಿರಿಸಿದೆ.
ಇನ್ನು ಕ್ಷಮೆಯಾಚಿಸುವುದಿಲ್ಲ, ಯಾವುದೇ ಶಿಕ್ಷೆ ನೀಡಿದರೂ ಅನುಭವಿಸಲು ಸಿದ್ದ ಎಂದು ಹೇಳಿದ ಪ್ರಶಾಂತ್ ಭೂಷಣ್ ಅವರ ಬಗ್ಗೆ ಆಶ್ಚರ್ಯ ಸೂಚಿಸಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು, "ಕ್ಷಮೆಯಾಚಿಸುವುದರಲ್ಲಿ ತಪ್ಪೇನಿದೆ? ಕ್ಷಮೆಯಾಚಿಸುವುದು ಪಾಪವೇ? ಅದು ಅಪರಾಧವನ್ನು ಪ್ರತಿಬಿಂಬಿಸುತ್ತದೆಯೇ? 'ಕ್ಷಮೆಯಾಚನೆ' ಎಂಬುವುದು ಒಂದು ಮಾಂತ್ರಿಕ ಪದ. ನೀವು ಕ್ಷಮೆಯಾಚಿಸಿದರೆ ಮಹಾತ್ಮ ಗಾಂಧಿಯ ವರ್ಗಕ್ಕೆ ಸೇರಿದಂತೆಯೇ ಸರಿ. ಮಹಾತ್ಮ ಗಾಂಧಿ ಉಪವಾಸ ಮಾಡುತ್ತಿದ್ದರು. ಅದು ಅವರಿಗಾಗಿ ಅಲ್ಲ, ಇತರರ ಪಾಪಗಳಿಗಾಗಿ ಎಂದು ಹೇಳಿದ್ದಾರೆ.
ಇನ್ನು ಪ್ರಶಾಂತ್ ಭೂಷಣ್ ಪರ ಹಿರಿಯ ವಕೀಲ ರಾಜೀವ್ ಧವನ್ ಅವರು, ಪ್ರಶಾಂತ್ ಅವರು ಹತ್ಯೆ ಅಥವಾ ಸುಲಿಗೆ ಮಾಡಿರುವ ದೋಷಿಯಲ್ಲ. ಅವರಿಗೆ ಶಿಕ್ಷೆ ನೀಡುವ ತೀರ್ಪನ್ನ ಮರು ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದರು.
ಅಟಾರ್ನಿ ಜನರಲ್ ವೇಣುಗೋಪಾಲ್ ಅವರು ಭೂಷಣ್ ಅವರಿಗೆ ಶಿಕ್ಷೆ ನೀಡಬೇಡಿ ಎಂದು ಒತ್ತಾಯಿಸಿದರು. ನ್ಯಾಯಾಲಯವು ತನ್ನ ಸಹಾನುಭೂತಿಯ ಮೂಲಕ ತನ್ನ ಶ್ರೇಷ್ಠತೆಯನ್ನು ಹೆಚ್ಚಿಸಲು ಇದು ಒಂದು ಅವಕಾಶವಾಗಿದೆ ಎಂದು ಹೇಳಿದರು.
ಸಿಜೆಐ ಎಸ್.ಎ. ಬೋಬ್ದೆ ಕಲಾಪಕ್ಕೆ ಗೈರು ಹಾಜರಾಗಿ ಐಷಾರಾಮಿ ಬೈಕ್ನಲ್ಲಿ ಹೆಲ್ಮೆಟ್ ಧರಿಸದೆ ಜಾಲಿ ರೈಡ್ ಮಾಡುತ್ತಿದ್ದಾರೆ ಎಂದು ಪ್ರಶಾಂತ್ ಟ್ವೀಟ್ನಲ್ಲಿ ನಿಂದಿಸಿದ್ದರು. ಆದರೆ ನಿಜವಾಗಿ, ಸ್ಟಾಂಡ್ ಹಾಕಿದ್ದ ಬೈಕ್ ಮೇಲೆ ಬೋಬ್ದೆ ಕುಳಿತು ಫೋಟೋ ತೆಗೆಸಿಕೊಂಡಿದ್ದರು ಎಂದು ಹೇಳಲಾಗಿದೆ.