ಲಕ್ನೋ, ಆ. 26 (DaijiworldNews/MB) : ತನ್ನ ಯುಟ್ಯೂಬ್ ಚಾನೆಲ್ನಲ್ಲಿ ಹಿಂದೂ ದೇವತೆಗಳ ಬಗ್ಗೆ ದ್ವೇಷಪೂರಿತ, ಅವಹೇಳನಕಾರಿ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದ ಯೂಟ್ಯೂಬರ್ ಹೀರ್ ಖಾನ್ ಪ್ರಯಾಗರಾಜ್ ಪೊಲೀಸರು ಬಂಧಿಸಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರ ಶಲಾಬ್ ಮಣಿ ತ್ರಿಪಾಠಿ ತಮ್ಮ ಬ್ಲಾಗ್ ಮೂಲಕ ತಿಳಿಸಿದ್ದಾರೆ. ಹಾಗೆಯೇ ಆಕೆ ತನ್ನ ಸಂಬಂಧಿಕರ ಮನೆಯಲ್ಲಿ ಅಡಗಿಕೊಂಡಿದ್ದಳು ಎಂದು ತ್ರಿಪಾಠಿ ಖಚಿತಪಡಿಸಿದ್ದಾರೆ.
ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಉತ್ತರ ಪ್ರದೇಶ ಪೊಲೀಸರನ್ನು ಟ್ಯಾಗ್ ಮಾಡಿ ಆಕೆಯ ವಿರುದ್ದ ಕೂಡಲೇ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದ ಪ್ರಯಾಗರಾಜ್ ಪೊಲೀಸರು ಖುಲ್ದಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೆಲವು ಹಿಂದೂ ನಾಯಕರು ಕೂಡಾ ಈ ಯುಟ್ಯೂಬ್ ಬಳಕೆದಾರರ ವಿರುದ್ಧ ದೂರುಗಳನ್ನು ನೀಡಿದ್ದರು. ಟ್ವಿಟರ್ನಲ್ಲಿ #ArrestHeerKhan ಎಂಬ ಹ್ಯಾಶ್ಟ್ಯಾಗ್ ಟ್ರೆಂಡಿಂಗ್ ಆಗಲು ಆರಂಭಿಸಿತ್ತು.
ಇನ್ನು ಯೂಟ್ಯೂಬರ್ ಹೀರ್ ಖಾನ್ ವಿರುದ್ದ ಎಫ್ಐಆರ್ ದಾಖಲಾಗುತ್ತಿದ್ದಂತೆ ಆಕೆ ನಾಪತ್ತೆಯಾಗಿದ್ದಳು ಎಂದು ಹೇಳಲಾಗಿದ್ದು ಬಗ್ಗೆ ಪೊಲೀಸರು ಆಕೆಯ ಪತ್ತೆಗಾಗಿ ಹಲವಾರು ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ್ದು ಕೊನೆಗೆ ಆಕೆ ತನ್ನ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾಳೆ.
ಆಗಸ್ಟ್ 23 ರಂದು ಅಪ್ಲೋಡ್ ಮಾಡಲಾದ ವೀಡಿಯೊವೊಂದರಲ್ಲಿ, ಹಿಂದೂ ದೇವರು ಮತ್ತು ದೇವತೆಗಳ ವಿರುದ್ಧ ಅತ್ಯಂತ ಅವಾಚ್ಯ, ಅವಹೇಳನಕಾರಿ ಪದಗಳನ್ನು ಬಳಸಲಾಗಿದೆ. ಹಾಗೆಯೇ ಅದರ ಮರುದಿನ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಆಕೆ ಹಿಂದೂಗಳಿಗೆ ಅತ್ಯಾಚಾರ ಮತ್ತು ಹಿಂಸಾಚಾರದ ಬೆದರಿಕೆ ಹಾಕಿದ್ದಾಳೆ. ಆಕೆಯ ಅವಹೇಳನಕಾರಿ ವೀಡಿಯೊಗಳು ಶೀಘ್ರವೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಬಳಿಕ ಅನೇಕ ಮಂದಿ ಆಕೆಯ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.