ಕಡಪ, ಆ. 26 (DaijiworldNews/MB) : ಕೊರೊನಾ ಸೋಂಕು ಪಾಸಿಟಿವ್ ಆದ ಕಾರಣ ಖಿನ್ನತೆಗೆ ಒಳಗಾಗಿ ಆಂಧ್ರಪರದೇಶ ಕಡಪ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿ ತಿಳಿಸಿದೆ.
ಎರ್ರಾಕುಂಟ್ಲಾ ಮಂಡಲದ ಚಿಲಮಕೂರು ಮೂಲದ 55 ವರ್ಷದ ಕಾಂಗ್ರೆಸ್ನ ಹಿರಿಯ ನಾಯಕ, ಕಡಪ ಜಿಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಿಗೆ ಇತ್ತೀಚೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು ಪ್ರೊದ್ದುತೂರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಸಂಜೆಗೆ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ತಡೆದರು ಕೂಡಾ ಆಸ್ಪತ್ರೆಯ ಮಾಲೀಕರು ತನ್ನ ಗೆಳೆಯ ಎಂದು ಹೇಳಿಕೊಂಡು ತಮ್ಮ ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಯಿಂದ ಹೊರ ಹೋಗಿದ್ದಾರೆ.
ಕೂಡಲೇ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಆಸ್ಪತ್ರೆಯ ನಿರ್ವಾಹಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು ಪೊಲೀಸರಿಗೆ ದೂರು ನೀಡಲಾಗಿದೆ. ಮೊಬೈಲ್ ಸಿಗ್ನಲ್ ಆಧಾರದ ಮೇಲೆ ಪೊಲೀಸರು ಅವರ ಹುಡುಕಾಟ ನಡೆಸಿದ್ದು ಸುನ್ನಪುರಲ್ಲಪಲ್ಲೆ ರೈಲ್ವೆ ಹಳಿ ಮೇಲೆ ಮಂಗಳವಾರ ರಾತ್ರಿ ಕೊರೊನಾ ಸೋಂಕಿತ ಕಾಂಗ್ರೆಸ್ನ ಹಿರಿಯ ಮುಖಂಡನ ಮೃತ ದೇಹ ದೊರೆತಿದ್ದು ಡೆತ್ನೋಟ್ ಕೂಡಾ ಪತ್ತೆಯಾಗಿದೆ.
ಡೆತ್ನೋಟ್ನಲ್ಲಿ ಮೃತ ಕಾಂಗ್ರೆಸ್ ನಾಯಕ, ನನ್ನ ಆತ್ಮಹತ್ಯೆಗೆ ಯಾರೂ ಕಾರಣರಲ್ಲ,ಕೊರೊನಾ ಪಾಸಿಟಿವ್ ಆದ ಕಾರಣ ಖಿನ್ನತೆಗೊಂಡು ಆತ್ಮಹತ್ಯೆಯ ತೀರ್ಮಾನ ಮಾಡಿದ್ದೇನೆ ಎಂದು ಬರೆದಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕನ ನಿಧನಕ್ಕೆ ರಾಜ್ಯ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಅಧ್ಯಕ್ಷ ಎನ್ ತುಳಸಿ ರೆಡ್ಡಿ ಸಂತಾಪ ಸೂಚಿಸಿ ಕೊರೊನಾ ಸೋಂಕಿತರು ಧೈರ್ಯದಿಂದ ಕೊರೊನಾದ ವಿರುದ್ದ ಹೋರಾಡುವಂತೆ ಮನವಿ ಮಾಡಿದ್ದಾರೆ.