ಮೈಸೂರು, ಆ 26 (DaijiworldNews/PY): ರಾಜ್ಯದಲ್ಲಿ ವಿಜಯೇಂದ್ರ ಪರ್ಯಾಯ ಸರ್ಕಾರ ಎನ್ನುವ ಬಗ್ಗೆ ತಮ್ಮ ಹೈಕಮಾಂಡ್ಗೆ ಬಿಜೆಪಿಯ ಏಳು ಶಾಸಕರು ಬರೆದಿದ್ದಾರೆ ಎನ್ನುವ ಪತ್ರವನ್ನು ಬುಧವಾರ ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬಿಡುಗಡೆ ಮಾಡಿದ್ದಾರೆ.
ಬಿಜೆಪಿ ಶಾಸಕರು ಬರೆದ ಪತ್ರದಲ್ಲಿ, ವರ್ಷದ ಅವಧಿಯಲ್ಲಿ ವಿಜಯೇಂದ್ರ ಅವರು ಸುಮಾರು 5 ಕೋಟಿ ಹಣ ಸಂಗ್ರಹ ಮಾಡಿದ್ದಾರೆ. ಆದರೆ, ಸಿಎಂ ಬಿಎಸ್ವೈ ಅವರು ಬೆಳಗಾವಿಯಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಹಣವಿಲ್ಲ ಎಂದು ಹೇಳಿದ್ದಾರೆ. ಪುತ್ರ ಸಂಗ್ರಹಿಸಿದ ಹಣದಲ್ಲಿ ಸಿಎಂ ಅವರು ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದಿದ್ದಾರೆ.
ಎಲ್ಲಾ ವಿಚಾರಕ್ಕೂ ವಿಜಯೇಂದ್ರ ಅವರ ಅನುಮತಿ ಬೇಕು. 31 ಮಂದಿಯನ್ನು ಪ್ರತಿ ಇಲಾಖೆಯ ಮೇಲುಸ್ತುವಾರಿಗಾಗಿ ತಂಡ ಮಾಡಿದ್ದು, ಈ ಮೂಲಕ ವಿಜಯೇಂದ್ರ ಪರ್ಯಾಯ ಸರ್ಕಾರ ನಡೆಸುತ್ತಿದ್ದಾರೆ. ಇವು ಇಷ್ಟೇ ಅಲ್ಲ. ನಮ್ಮಲ್ಲಿ ಬಿಜೆಪಿ ಶಾಸಕರ ಪತ್ರದ ಬಗ್ಗೆ ಇನ್ನೂ ಸಾಕ್ಷ್ಯಗಳಿವೆ. ವಿಜಯೇಂದ್ರ ಮಾಡಿರುವ ಪರ್ಯಾಯ ಸರ್ಕಾರದ ದಂಧೆಯ ಬಗ್ಗೆ ನವದೆಹಲಿಯಲ್ಲಿ ಇನ್ನೂ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಲಕ್ಷ್ಮಣ್ ಹೇಳಿದ್ದಾರೆ.
ಶಾಸಕರ ಪತ್ರದ ವಿಚಾರವಾಗಿ ತನಿಖೆಯಾಗಬೇಕು. ಈ ಬಗ್ಗೆ ಹತ್ತು ದಿನಗಳ ಒಳಗಾಗಿ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಎಸಿಬಿ, ಲೋಕಾಯುಕ್ತ, ಐಟಿ, ಇಡಿ ಹಾಗೂ ಕೋರ್ಟ್ಗೆ ನಾವೇ ತೆರಳುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ನ ಮಾಜಿ ಸಚಿವ ಕೆ.ಜೆ.ಜಾರ್ಜ್ ಪುತ್ರ ರಾಣಾ ಜಾರ್ಜ್ ಹಾಗೂ ಆಪ್ತ ಕಿರಣ್ ಹೆಸರು ಕೂಡಾ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇವರಿಬ್ಬರೂ ಕೂಡಾ ಸಿಎಂ ಪುತ್ರ ವಿಜಯೇಂದ್ರ ಜೊತೆ ಶಾಮೀಲಾಗಿದ್ದಾರೆ ಎಂದು ಬರೆದಿದೆ.
ಈ ಬಗ್ಗೆ ಟ್ವೀಟ್ ಮೂಲಕ ಎಂ.ಲಕ್ಷ್ಮಣ್ ಅವರಿಗೆ ತಿರುಗೇಟು ನೀಡಿರುವ ಬಿಜೆಪಿ ಮುಖಂಡ ರಘು ಕೌಟಿಲ್ಯ, ವಿಜಯೇಂದ್ರರ ಜನಪ್ರಿಯತೆ ಸೂರ್ಯನಷ್ಟು ಪ್ರಖರ. ರಾಜಕೀಯ ಭೂಪಟದಲ್ಲಿ ಮರೆಯಾಗಿ ಅವಸಾನದತ್ತ ಸಾಗಿರುವ ಕಾಂಗ್ರೆಸ್ ಆಂತರಿಕ ಗುಂಪುಗಾರಿಕೆಯಿಂದ ಕಂಗೆಟ್ಟು ಹೋಗಿ ಹತಾಶೆಗೊಂಡಿದೆ ಇದನ್ನು ತಾಳಿಕೊಳ್ಳಲಾರದೇ ಹಳಸಲು ಅನ್ನ ವನ್ನು ಬಿಸಿಮಾಡಿ ಬಡಿಸಿದಂತೆ ಹಳೆಯ ನಕಲಿ ಪತ್ರ ಹಿಡಿದುಕೊಂಡು ‘ಬೆಟ್ಟ ಅಗೆದು ಇಲಿ ಹಿಡಿಯಲು ಹೊರಟಿದೆ ಎಂದಿದ್ದಾರೆ.
ಇದಕ್ಕಾಗಿ ಹಳಿ ಇಲ್ಲದೇ ರೈಲು ಬಿಡುವ ಮೈಸೂರಿನ ವಕ್ತಾರರೊಬ್ಬರನ್ನು ಬಳಸಿಕೊಂಡು ಬಿಜೆ ಪಿ ಉಪಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪನವರ ವರ್ಚಸ್ಸು ಕುಗ್ಗಿಸಲು ವ್ಯರ್ಥ ಪ್ರಯತ್ನ ನಡೆಸಿದೆ ಎಂದು ಕಿಡಿಕಾರಿದ್ದಾರೆ.
ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರದಲ್ಲಿದ್ದ ಮುಖ್ಯಮಂತ್ರಿಯ ಹೆಸರಿನಲ್ಲಿ ಯಾರ ಪುತ್ರರು ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರಿ ಕಚೇರಿಗಳಲ್ಲೇ ಅಧಿಕಾರಗಳ ಸಭೆ ನಡೆಸಿ ರಾಜಾ ರೋಷವಾಗಿ ಅಧಿಕಾರ ನಡೆಸುತ್ತಿದ್ದರು ಎಂಬುದು ಇಡೀ ಮೈಸೂರು ಜಿಲ್ಲೆ ಹಾಗೂ ರಾಜ್ಯದ ಜನತೆಗೇ ತಿಳಿದಿದೆ ಎಂದಿದ್ದಾರೆ.
ವಿಜಯೇಂದ್ರರು ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕ ಗೊಂಡ ನಂತರ’ಬಾಹುಬಲಿ -2’ ಮಾದರಿಯಲ್ಲಿ ಮೊನ್ನೆ ಮೈಸೂರಿಗೆ ಬಂದು ಎಬ್ಬಿಸಿ ಹೋದ ಅಲೆಯ ಅಬ್ಬರಕ್ಕೆ ತತ್ತರಿಸಿ ಹೋಗಿರುವ ಕಾಂಗ್ರೆಸ್ಸಿಗರು ಭವಿಷ್ಯದಲ್ಲಿ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಧೂಳಿ ಪಟವಾಗ ಬಹುದಾದ ಆತಂಕದಲ್ಲಿ ವಿಜಯೇಂದ್ರರ ವಿರುದ್ಧ ಹಸಿ ಸುಳ್ಳಿನ ಕಥೆ ಕಟ್ಟಲು ಹೊರಟಿದ್ದಾರೆ ಎಂದು ತಿಳಿಸಿದ್ದಾರೆ.