ಬೆಂಗಳೂರು, ಆ 26 (DaijiworldNews/PY): ಶಾಲಾ-ಕಾಲೇಜು ತೆರೆಯುವ ಬಗ್ಗೆ ಕೇಂದ್ರ ಸರ್ಕಾರ ಮಾರ್ಗ ಸೂಚಿ ಹೊರಡಿಸಿದ ಬಳಿಕ ಈ ವಿಚಾರವಾಗಿ ಚಿಂತನೆ ನಡೆಸಲಾಗುತ್ತದೆ. ಕೇಂದ್ರವು ಶಾಲಾ -ಕಾಲೇಜು ಆರಂಭದ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾರ್ಗಸೂಚಿ ಬಿಡುಗಡೆ ಮಾಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ಶಾಲಾ-ಕಾಲೇಜು ತೆರೆಯುವ ಬಗ್ಗೆ ಇಲ್ಲಿಯವರೆಗೆ ಮಾರ್ಗಸೂಚಿ ಹೊರಡಿಸಿಲ್ಲ. ಅಲ್ಲದೇ ಮಾರ್ಗಸೂಚಿ ಬಂದರೆ ಮಾತ್ರ ನಾವು ಈ ಬಗ್ಗೆ ಚಿಂತನೆ ನಡೆಸಲಿದ್ದೇವೆ ಎಂದಿದ್ದಾರೆ.
ಸೆಪ್ಟೆಂಬರ್ ಅಥವಾ ಅಕ್ಟೋಬರ್ನಲ್ಲಿ ಶಾಲೆ ತೆರೆಯುವ ವಿಚಾರವಾಗಿ ಇಲಾಖೆ ಇನ್ನೂ ತೀರ್ಮಾನ ಮಾಡಿಲ್ಲ. ಯಾವುದಕ್ಕೂ ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದರೆ ಮಾತ್ರವೇ ಮುಂದಿನ ಚಿಂತನೆ ಎಂದು ತಿಳಿಸಿದ್ದಾರೆ.