ಶ್ರೀನಗರ, ಆ 27 (DaijiworldNews/PY): ಪುಲ್ವಾಮಾ ಭಯೋತ್ಪಾದನಾ ಪ್ರಕರಣದಲ್ಲಿ ಬಂಧಿತಳಾಗಿದ್ದ 23 ವರ್ಷದ ಏಕೈಕ ಮಹಿಳಾ ಭಯೋತ್ಪಾದಕಿಯು ಕೃತ್ಯದ ರುವಾರಿಯೊಂದಿಗೆ ಸಂಪರ್ಕದಲ್ಲಿದ್ದಳು ಎಂಬ ಬಗ್ಗೆ ಎನ್ಐಎ ಚಾರ್ಜ್ಶೀಟ್ನಲ್ಲಿ ತಿಳಿಸಿದೆ.
ಇನ್ಶಾ ಜಾನ್ ಹಾಗೂ ಆಕೆಯ ತಂದೆ ಮಾರ್ಚ್ ತಿಂಗಳಿನಲ್ಲಿ ಪುಲ್ವಾಮದಲ್ಲಿ ಪೊಲೀಸರ ವಶವಾಗಿದ್ದರು. ಇನ್ಶಾ ಜಾನ್ ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ್ದು, ಈಕೆ ಪಾಕಿಸ್ತಾನದ ಬಾಂಬ್ ತಯಾರಕ ಹಾಗೂ ಪುಲ್ವಾಮಾ ದಾಳಿಯ ರುವಾರಿ ಮೊಹಮ್ಮದ್ ಉಮರ್ ಫಾರೂಕ್ನೊಂದಿಗೆ ಸಂಪರ್ಕದಲ್ಲಿದ್ದಳು. ಅಲ್ಲದೇ, ಆತನೊಂದಿಗೆ ಈಕೆ ಫೋನ್ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ನಿರಂತರ ಸಂಪರ್ಕದಲ್ಲಿದ್ದಳು ಎಂದು ಎನ್ಐಎ ಮಾಹಿತಿ ನೀಡಿದೆ.
ಎನ್ಐಎ ಅಧಿಕಾರಿಯೊಬ್ಬರು ಮಾತನಾಡಿದ್ದು, ನಮಗೆ ಇನ್ಶಾ ಹಾಗೂ ಮೊಹಮ್ಮದ್ ಫಾರೂಕ್ ನಡೆಸಿರುವ ಸಂಭಾಷಣೆಗಳು ಹಾಗೂ ಸಂದೇಶಗಳು ಸಿಕ್ಕಿದೆ. ಅಲ್ಲದೇ, ಈಕೆ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಆಕೆಯ ತಂದೆ ತಾರಿಕ್ ಪಿರ್ಗೆ ತಿಳಿದಿತ್ತು. ಇನ್ಶಾ ತಂದೆ ತಾರಿಕ್ ಪಿರ್ ಉಮರ್ ಹಾಗೂ ಆತನ ಇಬ್ಬರು ಸಹಚರರಿಗೆ ಸಂಚಾರ ಮಾಡುವ ಸಲುವಾಗಿ ನೆರವಾಗಿದ್ದ. ಅಲ್ಲದೇ, ತಂದೆ ಹಾಗೂ ಮಗಳು ಉಮರ್ ಫಾರೂಕ್, ಸಮೀರ್ ದಾರ್ ಮತ್ತು ಆದಿಲ್ ಅಹ್ಮದ್ ದಾರ್ಗೆ ಆಹಾರ, ಆಶ್ರಯ ನೀಡಿದ್ದಾರೆ ಎಂದು ಎನ್ಐಎ ತಿಳಿಸಿದೆ.
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14, 2019ರಂದು ಭಯೋತ್ಪಾದಕರು ನಡೆಸಿದ ಆತ್ಮಾಹುತಿ ಕಾರ್ ಬಾಂಬ್ ದಾಳಿ ಮಾಡಿದ್ದು, ಈ ಸಂದರ್ಭ 40 ಜನ ಭಾರತೀಯ ಯೋಧರು ಹುತ್ಮಾರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳವಾರ ಎನ್ಐಎ ಎಸ್ಪಿ ರಾಕೇಶ್ ಬಲ್ವಾಲ್ ಅವರು ಜಮ್ಮು ಕಾಶ್ಮೀರದ ವಿಶೇಷ ನ್ಯಾಯಾಲಯಕ್ಕೆ 19 ಉಗ್ರರ ವಿರುದ್ದ 13,500 ಪುಟಗಳ ಚಾರ್ಜ್ಶೀಟ್ ಸಲ್ಲಿಸಲಾಗಿದೆ.