ಬೆಂಗಳೂರು, ಆ 27 (DaijiworldNews/PY): ಡಿಸೆಂಬರ್ ವೇಳೆಗೆ ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತ್ ಚುನಾವಣೆ ನಡೆಸುವ ಸಾಧ್ಯತೆ ಇದ್ದು, ಚುನಾವಣೆಯನ್ನು, ಕೇಂದ್ರ ಚುನಾವಣಾ ಆಯೋಗ ಹೊರಡಿಸಿರುವ ನೂತನ ಮಾರ್ಗಸೂಚಿಗಳ ಪ್ರಕಾರ ಹಾಗೂ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನಡೆಸಲಿದೆ.
ಕರ್ನಾಟಕದಲ್ಲಿ 6,025 ಗ್ರಾಮ ಪಂಚಾಯತ್ಗಳಿವೆ ಜೂನ್-ಜುಲೈ ತಿಂಗಳಿನಲ್ಲಿ ಇದರ ಅಧಿಕಾರಾವಧಿ ಕೊನೆಗೊಂಡಿದೆ. ಕೊರೊನಾ ವೈರಸ್ ಹಿನ್ನೆಲೆ ಅಸಾಧಾರಣ ಸಂದರ್ಭ ಎಂದು ಉಲ್ಲೇಖಿಸಿ ಪಂಚಾಯತ್ ಚುನಾವಣೆಯನ್ನು ಮೇ ತಿಂಗಳಿನಲ್ಲಿ ಮುಂದೂಡುವುದಾಗಿ ಎಸ್ಇಸಿ ಘೋಷಣೆ ಮಾಡಿತ್ತು. ಏತನ್ಮಧ್ಯೆ ಚುನಾವಣೆ ಮುಂದೂಡುವಿಕೆಯ ಬಗ್ಗೆ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಪಿಐಎಲ್ ದಾಖಲಿಸಲಾಗಿತ್ತು.
21 ಜಿಲ್ಲೆಗಳಲ್ಲಿ ಪಂಚಾಯತ್ ಚುನಾವಣೆಗೆ ಮೀಸಲಾತಿ ಪಟ್ಟಿ ಸಿದ್ಧವಾಗಿದ್ದು ಹಾಗೂ ಉಳಿದ ಒಂಬತ್ತು ಜಿಲ್ಲೆಗಳು ಕಾಲಾವಕಾಶ ಕೋರಿವೆ ಎಂದು ಇತ್ತೀಚೆಗೆ ಎಸ್ಇಸಿ ಹೈಕೋರ್ಟ್ಗೆ ತಿಳಿಸಿತ್ತು.
ರಾಜ್ಯ ಚುನಾವಣಾ ಆಯುಕ್ತ ಬಿ. ಬಸವರಾಜು ಈ ಬಗ್ಗೆ ಮಾತನಾಡಿದ್ದು, ಕೊರೊನಾ ವೈರಸ್ ಹಿನ್ನೆಲೆ ಚುನಾವಣೆ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಕೊರೊನಾ ವೈರಸ್ ವೇಳೆಯಲ್ಲಿ ಚುನಾವಣಾ ಆಯೋಗವು ಚುನಾವಣೆ ನಡೆಸಲು ಮಾರ್ಗಸೂಚಿಗಳನ್ನು ಹೊರಡಿಸಿತು. ಈ ಮಾಹಿತಿಯ ಆಧಾರದ ಮೇಲೆ ನಾವು ಮಾರ್ಗಸೂಚಿಗಳನ್ನು ಹಾಗೂ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತೇವೆ ಎಂದು ಹೇಳಿದ್ದಾರೆ.
ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲುವ ಸಲುವಾಗಿ ನಮಗೆ ಹಣದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಾವು ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಪ್ರತಿ ಬೂತ್ಗೆ ಮತದಾರರ ಸಂಖ್ಯೆಯನ್ನು ನಿರ್ಬಂಧಿಸಬೇಕು. ಚುನಾವಣೆಯ ತಯಾರಿಕೆಯ ಬಗ್ಗೆ ಆಯಾ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದೇವೆ. ಅಲ್ಲದೇ, ಮತದಾರರ ಪಟ್ಟಿಯೂ ಸಿದ್ದವಾಗುತ್ತಿದ್ದು, ನಾವು ಪ್ರಕ್ರಿಯೆಯನ್ನು ಕೂಡಾ ಪ್ರಾರಂಭ ಮಾಡಿದ್ದೇವೆ. ಇದು ಪೂರ್ಣಗೊಳ್ಳಲು ಎರಡು ತಿಂಗಳುಗಳು ಬೇಕಾಗುತ್ತದೆ. ಈ ವರ್ಷಾಂತ್ಯದ ವೇಳೆಗೆ ಚುನಾವಣೆ ನಡೆಸುವ ವಿಶ್ವಾಸವಿದೆ ಎಂದಿದ್ದಾರೆ.