ಕೊಚ್ಚಿನ್, ಆ.27(DaijiworldNews/HR): ಕೋವಿಡ್ 19 ಕಾರಣದಿಂದ ಕೇರಳ ಮತ್ತು ಕರ್ನಾಟಕ ಗಡಿಯಲ್ಲಿ ಸಂಚಾರವನ್ನು ನಿಷೇಧಿಸಲಾಗಿದ್ದು, ಇದೀಗ ಜನರಿಗೆ ಅನುಕೂಲವಾಗುವಂತೆ ಇಂದಿನಿಂದ ನಾಲ್ಕು ರಸ್ತೆಗಳಲ್ಲಿ ಸಂಚಾರಕ್ಕೆ ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಕಾಸರಗೋಡು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ.
ಬಿಜೆಪಿ ಮುಖಂಡ ಮತ್ತು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಕೆ.ಶ್ರೀಕಾಂತ್ ಅವರು ಕೇರಳ ಮತ್ತು ಕರ್ನಾಟಕದ ನಡುವಿನ 12 ಅಂತರರಾಜ್ಯ ರಸ್ತೆಗಳ ಮೂಲಕ ಅಂತರರಾಜ್ಯ ಪ್ರಯಾಣಕ್ಕೆ ಅವಕಾಶವನ್ನು ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ಮುಖ್ಯ ನ್ಯಾಯಮೂರ್ತಿ ಎಸ್.ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.
ಶ್ರೀಕಾಂತ್ ಅವರ ಸಲಹೆಗಾರ ವಿ ಸಜಿತ್ ಕುಮಾರ್ ಅವರು ಕೇಂದ್ರದ ಅನ್ ಲಾಕ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಈ ಆದೇಶ ಹೊರಡಿಸಲಾಗಿದೆ ಎಂದು ಅರ್ಜಿ ಸಲ್ಲಿಸಿದ್ದರು. ವಾಹನಗಳ ಸಂಚಾರದ ನಿಷೇಧವು ಜಿಲ್ಲೆಯ ಜನರಿಗೆ ತೊಂದರೆಗಳನ್ನು ಉಂಟುಮಾಡುತ್ತಿದೆ ತೊಂದರೆಗೆ ಗುರಿಯಾಗುವ ಪ್ರದೇಶಗಳನ್ನು ಗುರುತಿಸಲಾಗಿದೆಯೆ ಎಂದು ಜಿಲ್ಲೆಯ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಮತ್ತು ಅಂತಹ ಅನಾಹುತಗಳನ್ನು ತಡೆಗಟ್ಟುವ ಕ್ರಮಗಳನ್ನು ಕೂಡ ಜಿಲ್ಲಾ ಮತ್ತು ಸ್ಥಳೀಯ ಅಧಿಕಾರಿಗಳು ತೆಗೆದುಕೊಳ್ಳಬೇಕಾಗಿದೆ ಎಂದು ಸರ್ಕಾರದ ಪರ ಅರ್ಜಿದಾರರು ಹೇಳಿದರು.
ರಾಜ್ಯದ ಗಡಿ ದಾಟಲು ಇಚ್ಚಿಸುವವರು ಪಾಸ್ ಪಡೆಯಬೇಕು ಮತ್ತು ಎರಡು ರಾಜ್ಯಗಳ ನಡುವೆ ಪ್ರಯಾಣಿಸಲು ಎನ್ಎಚ್ -47 ಮಾತ್ರವೇ ಮುಕ್ತವಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದ್ದು, ಕರ್ನಾಟಕಕ್ಕೆ ಹೋಗುವ ಇತರ ನಾಲ್ಕು ರಾಜ್ಯ ಹೆದ್ದಾರಿಗಳಾದ ಜಾಲ್ಸೂರು, ಪಾಣಿತ್ತೂರು, ಮಾಣಿಮೂಲೆ, ಪೆರ್ಲ ಗಡಿಗಳಲ್ಲಿ ವಿಧಿಸಲಾಗಿರುವ ಸಂಚಾರ ನಿಷೇಧವನ್ನು ಇಂದಿನಿಂದ ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಸೂಚಿಸಿದೆ.