ಬೆಂಗಳೂರು, ಆ.27(DaijiworldNews/HR): ಸ್ಯಾಂಡಲ್ ವುಡ್ ನಟ, ಗಾಯಕರಿಗೆ ಮಾದಕ ವಸ್ತು ನೀಡುತ್ತಿದ್ದ ಮಾಹಿತಿ ಸ್ಪೋಟವಾಗಿದ್ದು, ಎನ್ ಸಿಬಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಈ ಮಾಹಿತಿ ಬಯಲಾಗಿದ್ದು, 145 ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಮಾದಕ ದ್ರವ್ಯ ನಿಯಂತ್ರಣ ಘಟಕ ಅಧಿಕಾರಿಗಳು ಬೆಂಗಳೂರಿನ ಕಲ್ಯಾಣ್ ನಗರದ ಹೋಟೆಲ್ ಒಂದರಲ್ಲಿ ದಾಳಿ ನಡೆಸಿ 2.20 ಲಕ್ಷ ರೂ, ಮೌಲ್ಯದ 145 ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ದಾಳಿಯ ಮುಂದುವರಿದ ಭಾಗವಾಗಿ ನಗರದಲ್ಲಿ ಮತ್ತೊಂದು ದಾಳಿಯಲ್ಲಿ 96 ಎಮಡಿಎಂಎ ಮಾತ್ರೆಗಳನ್ನು ಮತ್ತು 180 ಎಲ್ ಎಸ್ಡಿ ಬ್ಲಾಟ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ಅಧಿಕಾರಿಗಳು ಮತ್ತೊಂದು ದಾಳಿ ನಡೆಸಿದ್ದು, ಪ್ರಕರಣದ ಪ್ರಮುಖ ಕಿಂಗ್ ಪಿನ್ ಆಗಿದ್ದ ಮಹಿಳೆಯೋರ್ವರ ಮನೆಗೆ ದಾಳಿ ಮಾಡಿ 270 ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಂ. ಅನೂಪ್, ಆರ್ ರವೀಂದ್ರನ್ ಮತ್ತು ಅನಿಖಾ. ಡಿ ಬಂಧಿತಾ ಆರೋಪಿಗಳೆಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು ಪ್ರಮುಖ ಸಂಗೀತಗಾರರು ಮತ್ತು ನಟರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ಶ್ರೀಮಂತ ವರ್ಗಗಳಿಗೆ ಮಾದಕ ಔಷಧಿಗಳನ್ನು ಸರಬರಾಜು ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.