ನವದೆಹಲಿ, ಆ 27 (DaijiworldNews/PY): ಕೊರೊನಾದ ನಡುವೆ ನೀಟ್, ಜೆಇಇ ಪರೀಕ್ಷೆಗಳನ್ನು ಮುಂದುವರೆಸುವ ಕೇಂದ್ರ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ಆಗಸ್ಟ್ 28ರ ಶುಕ್ರವಾರದಂದು ದೇಶದಾದ್ಯಂತ ಪ್ರತಿಭಟನೆ ಮಾಡುವುದಾಗಿ ಕಾಂಗ್ರೆಸ್ ಘೋಷಿಸಿದೆ.
ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ನ್ಯಾಯಯುತವಾದ ಆಂದೋಲನ ನಡೆಸುತ್ತಿದ್ದಾರೆ. ಕೊರೊನಾ ಬಿಕ್ಕಟ್ಟಿನ ನಡುವೆ ನಡೆಯಲಿರುವ ಜೆಇಇ, ನೀಟ್ ಪರೀಕ್ಷೆಗಳನ್ನು ಮುಂದೂಡಬೇಕು. ಕೇಂದ್ರದ ಬುದ್ದಿಹೀನ ಧೋರಣೆಯನ್ನು ವಿರೋಧಿಸಿ ನಾಳೆ ಬೆಳಗ್ಗೆ 11 ಗಂಟೆಗೆ ರಾಜ್ಯ ಹಾಗೂ ಜಿಲ್ಲಾ ಕೇಂದ್ರಗಳಲ್ಲಿರುವ ಕೇಂದ್ರ ಸರ್ಕಾರದ ಮುಖ್ಯ ಕಚೇರಿ ಎದು ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಹೇಳಿಕೆ ತಿಳಿಸಿದ್ದಾರೆ.
ಆ.27ರ ಬುಧವಾರದಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಿಜೆಪಿಯೇತರ ಮುಖ್ಯಮಂತ್ರಿಗಳ ಸಭೆ ಕರೆದಿದ್ದು, ಕೇಂದ್ರ ಸರ್ಕಾರದ ಈ ಕ್ರಮದ ಬಗ್ಗೆ ಸಾಮೂಹಿಕವಾಗಿ ವಿರೋಧಿಸಬೇಕು ಎಂದು ತಿಳಿಸಿದ್ದರು.