ಬೀದರ್, ಆ 27 (DaijiworldNews/PY): ಡಿಕೆಶಿ ಅವರ ಫೋನ್ ಸರಿಯಾಗದಿದ್ದರೆ ಶಿವಾಜಿ ನಗರದಲ್ಲಿರುವ ಒಳ್ಳೆಯ ಅಂಗಡಿಗೆ ರಿಪೇರಿಗೆ ನೀಡಲಿ ಇಲ್ಲದಿದ್ದಲ್ಲಿ ಹೊಸ ಫೋನ್ ಖರೀದಿ ಮಾಡಲಿ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋನ್ ಟ್ಯಾಪ್ನಂತಹ ಕಾರ್ಯಯನ್ನು ಬಿಜೆಪಿ ಮಾಡುವುದಿಲ್ಲ. ದೇಶದಲ್ಲಿ ಫೋನ್ ಕದ್ದಾಲಿಕೆ ಕಂಡುಹಿಡಿದ ಪಿತಾಮಹರು ಕಾಂಗ್ರೆಸ್ಸಿಗರು. ಆದರೆ, ಕದ್ದಾಲಿಕೆಯನ್ನು ಯಾರು ಮಾಡಿ ತನಿಖೆ ಎದುರಿಸುತ್ತಿರುವ ವಿಚಾರವು ಅವರ ಬಾಯಿಂದ ಬರುತ್ತಿರುವುದು ಆಶ್ಚರ್ಯದ ಸಂಗತಿ ಎಂದರು.
ಫೋನ್ ಕದ್ದಾಲಿಕೆಯ ಸುದ್ದಿ ಈಗ ಕೇಳಿ ಬರುತ್ತಿಲ್ಲ. ಬದಲಾಗಿ ಹಿಂದಿನ ಸರ್ಕಾರದ ಅವಧಿಯಿಂದಲೂ ಕೇಳಿಬರುತ್ತಿದೆ. ಅಲ್ಲದೇ, ಆದಿ ಚುಂಚನಗಿರಿ ಸ್ವಾಮೀಜಿ ಅವರು ಸೇರಿ ಹಲವು ಮಂದಿಯ ಫೋನ್ ಟ್ಯಾಪ್ ಆಗಿದೆ. ಈ ವಿಚಾರದ ಬಗ್ಗೆ ತನಿಖೆಯೂ ಆಗುತ್ತಿದೆ ಎಂದು ತಿಳಿಸಿದರು
ಇನ್ನು ಡಿಜೆ ಹಳ್ಳಿ ಗಲಭೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ತನಿಖೆಯ ಸಂದರ್ಭ ಬಂಧಿತ ಆರೋಪಿಗಳು ವಿದೇಶಿ ಐಎಸ್ಐ ಸಂಘಟನೆಗಳೊಂದಿಗೆ ಸಂಪರ್ಕ ಇರುವುದು ತಿಳಿದುಬಂದಿದೆ. ಈ ಗಲಭೆಯ ಮೂಲಕ ಬೆಂಗಳೂರಿನಲ್ಲಿ ಭಯ ಸೃಷ್ಠಿಸುವವರನ್ನು ಸರ್ಕಾರ ಕಟಕಟ್ಟೆಗೆ ಏರಿಸಲಿದೆ. ಕಾಂಗ್ರೆಸ್ ಕೂಡಾ ಈ ವಿಚಾರದಿಂದ ಎಚ್ಚೆತ್ತುಕೊಳ್ಳಬೇಕಿದೆ.