ನವದೆಹಲಿ, ಆ. 28 (DaijiworldNews/MB) : ಇತ್ತೀಚೆಗೆ ಕಾಂಗ್ರೆಸ್ನ 23 ನಾಯಕರು ಕಾಂಗ್ರೆಸ್ ಪಕ್ಷದಲ್ಲಿ ಮುಖಂಡತ್ವದ ಬಗ್ಗೆ ಪ್ರಶ್ನಿಸಿ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದು ಈ ಹಿನ್ನೆಲೆ ಸೋನಿಯಾ ಅವರು ರಾಜ್ಯಸಭೆಯಲ್ಲಿ ಐವರು ಸದಸ್ಯರ ಕಾರ್ಯತಂತ್ರ ಸಮಿತಿಯನ್ನು ರಚಿಸಿದ್ದಾರೆ.
ಪತ್ರ ಬರೆದು ಸಹಿ ಹಾಕಿದವರಲ್ಲಿದ್ದ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಗುಲಾಂ ನಬಿ ಆಜಾದ್ ಮತ್ತು ಪಕ್ಷದ ಉಪ ನಾಯಕ ಆನಂದ್ ಶರ್ಮ ಒಳಗೊಂಡತೆ ತಮ್ಮ ನಿಷ್ಠಾವಂತ ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್, ಕೆ ಸಿ ವೇಣುಗೋಪಾಲ್, ಜೈರಾಮ್ ರಮೇಶ್ ಅವರನ್ನು ಒಳಗೊಂಡ ಪಂಚ ಸದಸ್ಯರ ಕಾರ್ಯತಂತ್ರ ಸಮಿತಿ ರಚನೆ ಮಾಡಲಾಗಿದೆ. ಇನ್ನು ಈ ಸಮಿತಿಯನ್ನು ಸದನದಲ್ಲಿ ಕಾಂಗ್ರೆಸ್ನ ಬಲ ಹೆಚ್ಚಿಸಲು ಹಾಗೂ ಆಡಳಿತ ಪಕ್ಷವನ್ನು ಸಮರ್ಥವಾಗಿ ಎದುರಿಸಲು ರಚಿಸಲಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿಕೊಂಡ ಭುವನೇಶ್ವರ್ ಕಲಿಟಾ ಅವರು ನಿರ್ವಹಿಸುತ್ತಿದ್ದ ರಾಜ್ಯಸಭೆಯ ಮುಖ್ಯ ಸಚೇತಕ ಹುದ್ದೆಗೆ ಈಗ ಜೈರಾಮ್ ರಮೇಶ್ ಅವರನ್ನು ನೇಮಿಸಲಾಗಿದೆ.
ಕಾಂಗ್ರೆಸ್ ನಾಯಕರು ಪಕ್ಷದಲ್ಲಿನ ಮುಖಂಡತ್ವದ ಬದಲಾವಣೆಗೆ ಸಂಬಂಧಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ ಬಳಿಕ ಕಳೆದ ಸೋಮವಾರ ಕಾಂಗ್ರೆಸ್ನ ವರ್ಚುವಲ್ ಕಾರ್ಯಕಾರಿಣಿ ಸಭೆ ನಡೆದಿದ್ದು ಬಳಿಕ ಹಾಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.