ನವದೆಹಲಿ, ಆ. 28 (DaijiworldNews/MB) : ಆಗಸ್ಟ್ 24ರವರೆಗೆ 1095 ಲುಕ್ಔಟ್ ಸುತ್ತೋಲೆಗಳನ್ನು ಅಳಿಸಲಾಗಿದ್ದು ತಬ್ಲೀಗಿ ಜಮಾತ್ನ 630 ವಿದೇಶಿ ಸದಸ್ಯರು ಭಾರತದಿಂದ ವಾಪಾಸ್ ಹೋಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ತಬ್ಲೀಗಿ ಜಮಾತ್ನ ವಿದೇಶಿ ಸದಸ್ಯರು ವೀಸಾ ನಿಯಮವನ್ನು ಉಲ್ಲಂಘಿಸಿ ಲಾಕ್ಡೌನ್ ಕಾರಣ ಭಾರತದಲ್ಲಿ ಉಳಿದುಕೊಂಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, ಆಗಸ್ಟ್ 24ರವರೆಗೆ 1095 ಲುಕ್ಔಟ್ ಸುತ್ತೋಲೆಗಳನ್ನು ಅಳಿಸಲಾಗಿದ್ದು ಆ ಸಂದರ್ಭದಲ್ಲೇ ತಬ್ಲೀಗಿ ಜಮಾತ್ನ 630 ವಿದೇಶಿ ಸದಸ್ಯರು ಭಾರತದಿಂದ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಹಾಗೆಯೇ ಲಾಕ್ಡೌನ್ ಸಂದರ್ಭದಲ್ಲಿ ಇಲ್ಲಿ ಉಳಿದಿದ್ದವರನ್ನು ಅವರ ದೇಶಗಳಿಗೆ ಯಾವ ರೀತಿ ವಾಪಾಸ್ ಕಳುಹಿಸಲಾಗಿದೆ ಎಂಬ ಬಗ್ಗೆ ಮಾತನಾಡಿದ ಅವರು ಆಯಾ ವಿದೇಶಿ ರಾಯಭಾರ ಕಚೇರಿಗಳಿಗೆ ಎಲ್ಲಾ ಪ್ರಕ್ರಿಯೆಯ ಬಗ್ಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ವೀಸಾ ನಿಯಮ ಉಲ್ಲಂಘಿಸಿ ಇತರೆ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ವಿದೇಶಿ ತಬ್ಲೀಗಿಗಳ ವಿರುದ್ದ ಪ್ರಕರಣ ದಾಖಲು ಮಾಡಲಾಗಿತ್ತು. ಈ ಚಟುವಟಿಕೆಗಳಲ್ಲಿ ಭಾಗಿಯಾಗಬೇಕಾದರೆ ಸೂಕ್ತ ವರ್ಗದ ವೀಸಾವನ್ನು ಪಡೆದಿರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.