ನವದೆಹಲಿ, ಆ. 28 (DaijiworldNews/MB) : ''ಬಿಜೆಪಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸುತ್ತಿಲ್ಲ'' ಎಂದು ಪಕ್ಷದ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಯೋಜನೆ ಮಾಡಿದ್ದ ವೆಬಿನಾರ್ನಲ್ಲಿ ಮಾತನಾಡಿದ ಅವರು, ''ಬಿಜೆಪಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುತ್ತಿಲ್ಲ. ಸಂವಿಧಾನದಲ್ಲಿಯೂ ಆ ರೀತಿ ಮಾಡಲು ಅವಕಾಶವಿಲ್ಲ ಎಂದು ಹೇಳಿದ್ದು ಈ ವೇಳೆ ಹಿಂದುತ್ವ ಅಸ್ತಿತ್ವದಲ್ಲಿ ಇರುವವರೆಗೂ ಬಿಜೆಪಿ ಅಧಿಕಾರದಲ್ಲಿ ಇರುತ್ತದೆ'' ಎಂದು ಹೇಳಿದ್ದಾರೆ.
ಕಾಂಗ್ರೆಸ್ನ ವಿರುದ್ದ ಆರೋಪಗಳನ್ನು ಮಾಡಿದ ಅವರು, ''ಹಲವಾರು ವರ್ಷಗಳಿಂದ ಕಾಂಗ್ರೆಸ್ ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಿದೆ. ಈ ಹಿಂದೆ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಒಂದುಗೂಡಿಸಿ ಹಿಂದೂಗಳನ್ನು ವಿಭಜನೆ ಮಾಡಿ ಸರ್ಕಾರ ರಚಿಸಿತ್ತು. ಆರ್ಯರು, ದ್ರಾವಿಡರು, ಜಾತಿ ಮತ್ತಿತರರ ಇತಿಹಾಸ ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರ ರಚಿಸಿದೆ. ಕಾಂಗ್ರೆಸ್ನ ಒಡೆದು ಆಳುವ ನೀತಿಯಿಂದಾಗಿ ಈಗ ಅದಕ್ಕೆ ಮತ್ತೆ ಸರ್ಕಾರ ರಚಿಸಲು ಸಾಧ್ಯವಾಗುತ್ತಿಲ್ಲ'' ಎಂದು ಹೇಳಿದರು.
ಇನ್ನು ಇದೇ ಸಂದರ್ಭದಲ್ಲಿ , ''ಹಿಂದೂಗಳು ಎಲ್ಲಾ ಭಿನ್ನಾಭಿಪ್ರಾಯ ತೊರೆದು ರಾಜಕೀಯವಾಗಿ ಒಂದಾಗಬೇಕು'' ಎಂದು ಹೇಳಿದ ಅವರು, ''ಬಿಜೆಪಿಯ ಮತ ಪ್ರಮಾಣ ಏರಲು ಹಿಂದುತ್ವ ಸಿದ್ದಾಂತ ಕಾರಣ. ಹಿಂದುತ್ವ ಸಿದ್ಧಾಂತ ಇರುವವರೆಗೆ ಬಿಜೆಪಿ ಗೆಲುವು ಸಾಧಿಸುತ್ತದೆ. ಆರ್ಥಿಕ ಸಾಧನೆ ಲೆಕ್ಕಕ್ಕೆ ಬರುವುದಿಲ್ಲ. ಆದರೆ ತೀರಾ ಕಳಪೆಯಾಗದಂತೆ ನೋಡಿಕೊಳ್ಳಬೇಕಾಗಿದೆ'' ಎಂದು ಹೇಳಿದ್ದಾರೆ.