ನವದೆಹಲಿ, ಆ 28 (DaijiworldNews/PY): ಪೂರ್ವ ಲಡಾಖ್ನಲ್ಲಿ ಸೇನಾ ಪಡೆಗಳನ್ನು ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸಲು ಚೀನಾ ತನ್ನ ಸೈನಿಕರನ್ನು ಎಲ್ಎಸಿಯಿಂದ ಹಿಂತೆಗೆದುಕೊಳ್ಳಬೇಕು ಎಂದು ಭಾರತ ಹೇಳಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಉಭಯ ರಾಷ್ಟ್ರಗಳ ಹಿರಿಯ ರಾಜತಾಂತ್ರಿಕರು ಈ ವಿಚಾರದ ಬಗ್ಗೆ ಚರ್ಚೆ ನಡೆಸಿ ಬಾಕಿಯಿರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಒಪ್ಪಿಗೆ ನೀಡಿ ಒಂದುವಾರ ಕಳೆದಿದೆ. ಆದರೂ ಕೂಡಾ ಭಾರತ ಹಾಗೂ ಚೀನಾ ನಡುವಿನ ವಾಸ್ತವಿಕ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸೈನ್ಯಗಳನ್ನು ಪರಸ್ಪರ ಹಿಂತೆಗೆದುಕೊಳ್ಳುವ ಪ್ರಕ್ರಿಯೆಯು ಸ್ಥಗಿತಗೊಂಡಿದೆ.
ಎಲ್ಎಸಿಯ ಉದ್ದಕ್ಕೂ ಮುಂಚೂಣಿಯ ಸೈನ್ಯವನ್ನು ಹಿಂತೆಗೆದುಕೊಳ್ಳುವಲ್ಲಿ ಭಾರತೀಯ ಸೇನೆ ಹಾಗೂ ಚೀನಾ ಸೇನೆಗಳು ಪ್ರಗತಿ ಸಾಧಿಸಿವೆ ಎಂದು ಗುರುವಾರ ಚೀನಾ ಹೇಳಿಕೊಂಡಿದೆ. ಗಾಲ್ವಾನ್ ಕಣಿವೆ ಘರ್ಷಣೆಯ ನಂತರ, ಚೀನಾ ಮತ್ತು ಭಾರತವು ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಿವೆ ಮತ್ತು ಎರಡೂ ಕಡೆಯ ಮುಂಚೂಣಿ ಪಡೆಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ಕಿಯಾನ್, ಬೀಜಿಂಗ್ನಲ್ಲಿ ಹೇಳಿದರು.
ಆದರೆ, ಇದನ್ನು ನವದೆಹಲಿಯ ಮೂಲವೊಂದು ತಳ್ಳಿ ಹಾಕಿತು.ಜುಲೈ ಎರಡನೇ ವಾರದಿಂದ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯು ಸ್ಥಗಿತಗೊಂಡಿದೆ ಎಂದು ಹೇಳಿದೆ. ಏಕೆಂದರೆ, ಚೀನಾದ ಪಿಐಎಲ್ ಭಾರತದ ಹಲವಾರು ಪ್ರದೇಶಗಳಿಂದ ಸೈನ್ಯವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ನಿರಾಕರಿಸಿತು ಎಂದು ತಿಳಿಸಿವೆ.
ಸಂಪೂರ್ಣ ನಿಷ್ಕ್ರಿಯತೆಗೆ ಎರಡೂ ಕಡೆಯಿಂದ ಸೈನ್ಯವನ್ನು ಮರು ನಿಯೋಜಿಸುವ ಅಗತ್ಯವಿರುತ್ತದೆ. ಪರಸ್ಪರ ಒಪ್ಪಿದ ಬಳಿಕ ಈ ಕ್ರಿಯೆಗಳ ಮೂಲಕ ಮಾತ್ರ ಇದನ್ನು ಮಾಡಲು ಸಾಧ್ಯ ಎಂದು ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.