ಬೆಂಗಳೂರು, ಆ. 28 (DaijiworldNews/MB) : ಮೀಸಲಾತಿ ವಿರೋಧಿಸುವ ನಾಯಕರಿಗೆ ಬಿಜೆಪಿ ನೀಡುತ್ತಿರುವ ಬೆಂಬಲವೇ ದಲಿತರ ಹತ್ಯೆಗೆ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.
ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ನಡೆದ ಯುವಕನ ಹತ್ಯೆಗೆ ಸಂಬಂಧಿಸಿ ಪತ್ರಿಕೆಯೊಂದರ ವರದಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ವಿಜಯಪುರದ ಸಿಂದಗಿಯಲ್ಲಿ ನಡೆದಿರುವ ದಲಿತ ಯುವಕನ ಹತ್ಯೆ ಹೇಯವಾದುದು ಮತ್ತು ಮನುಷ್ಯರೆಲ್ಲರೂ ತಲೆತಗ್ಗಿಸುವಂತಹದ್ದು. ಮುಖ್ಯಮಂತ್ರಿ ಯಡಿಯೂರಪ್ಪನವರು ತಕ್ಷಣ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕ್ಕೆ ಚಾಲನೆ ನೀಡಬೇಕು. ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ನಡೆಸಿದರೆ ಮುಖವಾಡ ಬಯಲು ಮಾಡಲು ಬೀದಿಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ, ಮೀಸಲಾತಿಯನ್ನು ವಿರೋಧಿಸುವ, ದಲಿತರನ್ನು ಕೀಳಾಗಿ ಕಾಣುವ ನಾಯಕರಿಗೆ ಬಿಜೆಪಿ ನೀಡುತ್ತಿರುವ ಬೆಂಬಲವೇ ಇಂತಹ ಕೊಲೆಗಡುಕರು ನಿರ್ಭಯವಾಗಿ ಈ ರೀತಿಯ ದುಷ್ಕೃತ್ಯಕ್ಕೆ ಇಳಿಯಲು ಕಾರಣ. ಬಾಯಲ್ಲಿ ಸಮಾನತೆಯ ಮಂತ್ರ, ಆಚರಣೆಯಲ್ಲಿ ಅಸಮಾನತೆಯ ಕುತಂತ್ರ ಎಂದು ಹೇಳಿದ್ದಾರೆ.
ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ತಮಗೆ ಸರಿಸಮಾನಾಗಿ ಕುಳಿತಿದ್ದ ಕಾರಣಕ್ಕಾಗಿ ಅನಿಲ ಇಂಗಳಗಿ ಎಂಬ ಯುವಕನನ್ನು ಅದೇ ಗ್ರಾಮದ ಕೆಲವರು ಹತ್ಯೆ ಮಾಡಿದ್ದಾರೆ ಎಂದು ಆರೋಪ ಮಾಡಿ ಯುವಕನ ಕುಟುಂಬಸ್ಥರು ಶವ ಇಟ್ಟು ಪ್ರತಿಭಟನೆ ನಡೆಸಿದ್ದರು.