ಬೆಂಗಳೂರು, ಆ 28 (DaijiworldNews/PY): ಸರ್ಕಾರವು, ಪಿಯುಸಿ ಶಿಕ್ಷಣ ಮಂಡಳಿ ಹಾಗೂ ಎಸ್ಸೆಸ್ಸೆಲ್ಸಿ ಮಂಡಳಿ ಇವೆರಡನ್ನು ವಿಲೀನ ಮಾಡಲು ತೀರ್ಮಾನ ಮಾಡಿದೆ. ಇದು ಶೀಘ್ರವೇ ವಿಲೀನವಾಗಲಿದ್ದು, ಪ್ರಾಥಮಿಕ ಶಿಕ್ಷಣ ಪರಿಷತ್ ಅನ್ನು ಶಿಕ್ಷಣ ಇಲಾಖೆಯ ಅಡಿಯಲ್ಲಿ ಆರಂಭಿಸಲಿದ್ದೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಶುಕ್ರವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪಿಯುಸಿ ಶಿಕ್ಷಣ ಮಂಡಳಿ ಹಾಗೂ ಎಸ್ಸೆಸ್ಸೆಲ್ಸಿ ಮಂಡಳಿಯನ್ನು ವಿಲೀನ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಮಾಡಲಿದ್ದೇವೆ. ಅಲ್ಲದೇ, ಇದರೊಂದಿಗೆ ಶಿಕ್ಷಣ ಇಲಾಖೆಯು ಉತ್ತಮ ಶಿಕ್ಷಕರಿಗೆ ವಿಶೇಷ ಪ್ರಶಸ್ತಿ ನೀಡು ಕಾರ್ಯ ಮಾಡಲಿದೆ ಎಂದು ತಿಳಿಸಿದರು.
ನಾನು ಶಿಕ್ಷಣ ಸಚಿವನಾಗಿ ಆ.27ಕ್ಕೆ ಒಂದು ವರ್ಷವಾಯಿತು. ಪ್ರಾರಂಭವೇ ಶಾಲಾ ಕಟ್ಟಡಗಳು ಪ್ರವಾಹದಿಂದ ಕುಸಿದು ಬಿದ್ದವು. ಈ ವೇಳೆ ಸಿಎಂ ಆರ್ಥಿಕವಾಗಿ ನೆರವಾದರು. ಇದಾದ ಬಳಿಕ ಕೊರೊನಾ ಸೋಂಕು ಪ್ರಾರಂಭವಾಗಿದ್ದು, ಶಿಕ್ಷಣ ಇಲಾಖೆಗೆ ದೊಡ್ಡ ಪರಿಣಾಮವಾಗಿ ಎದುರಾಯಿತು ಎಂದು ಹೇಳಿದರು.
ಈ ಕೊರೊನಾ ಸಂಕಷ್ಟದ ನಡುವೆ ಶಾಲಾರಂಭವನ್ನು ಯಾವಾಗ ಮಾಡುವುದು ಹಾಗೂ ತರಗತಿಗಳನ್ನು ಹೇಗೆ ತೆರೆಯುವುದು ಎಂದು ತಿಳಿಯುತ್ತಿಲ್ಲ. ಕೊರೊನಾ ಸಂದರ್ಭ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಿದ್ದೇವೆ. ಸಿಎಂ ಬಿಎಸ್ವೈ ಅವರು ನಮಗೆ ಧೈರ್ಯ ತುಂಬಿದ ಕಾರಣ ಇದು ಸಾಧ್ಯವಾಯಿತು. ನೀಟ್ ಹಾಗೂ ಜೆಇಇ ಪರೀಕ್ಷೆ ನಡೆಸುವುದು ಬೇಡ ಎನ್ನುವವರು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದ ಬಗ್ಗೆ ತಿಳಿದುಕೊಳ್ಳಿ ಎಂದರು.