ನವದೆಹಲಿ, ಆ 28 (DaijiworldNews/PY): ಪ್ರಧಾನ ಮಂತ್ರಿ ಜನಧನ ಯೋಜನೆಯು ಗ್ರಾಮೀಣ ಭಾಗದ ಅನೇಕ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡಿದೆ. ಅಲ್ಲದೇ, ಈ ಯೋಜನೆಯು ಬಡತನ ನಿರ್ಮೂಲನೆಯಂತಹ ಹಲವಾರು ಯೋಜನೆಗಳ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನ ಮಂತ್ರಿ ಜನಧನ ಯೋಜನೆಗೆ ಆರು ವರ್ಷಗಳು ತುಂಬಿರುವ ಹಿನ್ನೆಲೆ ಟ್ವೀಟ್ ಮಾಡಿರುವ ಅವರು, ಪ್ರಧಾನ ಮಂತ್ರಿ ಜನಧನ ಯೋಜನೆಗೆ ಧನ್ಯವಾದಗಳು. ಈ ಯೋಜನೆಯಿಂದ ಹಲವಾರು ಕುಟುಂಬಗಳ ಭವಿಷ್ಯವು ಸುರಕ್ಷಿತವಾಗಿದೆ. ಗ್ರಾಮೀಣ ಪ್ರದೇಶದವರು ಹಾಗೂ ಮಹಿಳೆಯರು ಈ ಯೋಜನೆಯ ಹೆಚ್ಚಿನ ಫಲಾಭವಿಗಳಾಗಿದ್ದಾರೆ. ಪಿಎಂ-ಜೆಡಿವೈ ಯಶಸ್ವಿಯಾಗಲು ಕಾರ್ಯನಿರ್ವಹಿಸಿದ ಎಲ್ಲರನ್ನೂ ನಾನು ಶ್ಲಾಘಿಸುತ್ತೇನೆ ಎಂದಿದ್ದಾರೆ.
ಪ್ರಧಾನ ಮಂತ್ರಿ ಜನಧನ ಯೋಜನೆಗೆ ಇಂದು ಆರು ವರ್ಷಗಳು ತುಂಬಿವೆ. ಈ ಯೋಜನೆಯಿಂದ ಬ್ಯಾಂಕ್ ಖಾತೆಗಳಿಂದ ದೂರ ಉಳಿದಿದ್ದ ಕೋಟ್ಯಾಂತರ ಮಂದಿ ಬ್ಯಾಂಕ್ ಖಾತೆಯನ್ನು ಹೊಂದಲು ಸಹಾಯವಾಗಿದೆ. ಈ ಯೋಜನೆಯಡಿ ಸುಮಾರು 40 ಕೋಟಿಗೂ ಅಧಿಕ ಮಂದಿ ಬ್ಯಾಂಕ್ ಖಾತೆ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.