ಬೆಂಗಳೂರು, ಆ. 28 (DaijiworldNews/MB) : ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿಚಾರವನ್ನು ಬಿಜೆಪಿ ಸರ್ಕಾರ ನಿರ್ಲಕ್ಷದಿಂದ ವಿವಾದ ಮಾಡಿಕೊಂಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.
ಬೆಳಗಾವಿಯ ಪೀರನವಾಡಿ ಗ್ರಾಮದ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣನ ಪ್ರತಿಮೆಯನ್ನು ಅಭಿಮಾನಿಗಳು ಮಧ್ಯರಾತ್ರಿ ಪ್ರತಿಷ್ಠಾಪನೆ ಮಾಡಿ ವಿಜಯೋತ್ಸವ ಆಚರಿಸಿದ್ದು ಆ. 15ರಂದು ಸಂಗೊಳ್ಳಿರಾಯಣ್ಣನ ಜಯಂತಿಯ ದಿನವಾಗಿದ್ದು, ಅಂದು ಸ್ಥಳೀಯ ರಾಯಣ್ಣನ ಅಭಿಮಾನಿಗಳು ಪ್ರತಿಷ್ಠಾಪಿಸಿದ್ದ ಪ್ರತಿಮೆಯನ್ನು ಅನುಮತಿ ಪಡೆಯದ ಕಾರಣ ಪೊಲೀಸರು ಕೆಲ ಹೊತ್ತಿನಲ್ಲೇ ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿದ್ದಾಗಿ ತಿಳಿಸಿದ್ದರು. ಇದನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿದ್ದು ರಾತ್ರೋರಾತ್ರಿ ಅಭಿಮಾನಿಗಳು ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ. ಇದನ್ನು ವಿರೋಧಿಸಿ ಛತ್ರಪತಿ ಶಿವಾಜಿ ಅಭಿಮಾನಿಗಳು ಬೆಳಿಗ್ಗೆ ಪ್ರತಿಭಟನೆ ನಡೆಸಿ ಶಿವಾಜಿ ಪ್ರತಿಮೆ ಸ್ಥಾಪನೆಗೆ ಯತ್ನಿಸಿದ್ದಾರೆ. ಬಳಿಕ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಶಿವಾಜಿ ಅಭಿಮಾನಿಗಳು ಹಾಗೂ ಎಂಐಎಸ್ ಬೆಂಬಲಿಗರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಇದೀಗ ಈ ಬಗ್ಗೆ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯನವರು, ''ಬೆಳಗಾವಿಯ ಪೀರನವಾಡಿಯಲ್ಲಿನ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗಾಗಿ ಹೋರಾಟ ನಡೆಸುತ್ತಿರುವವರ ಮೇಲಿನ ಪೊಲೀಸರ ಲಾಠಿ ಪ್ರಹಾರ ಖಂಡನೀಯ. ನಾನು ಈಗಷ್ಟೆ ಅಲ್ಲಿನ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮಿಷನರ್ ಜೊತೆ ಮಾತನಾಡಿ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸುವಂತೆ ತಿಳಿಸಿದ್ದೇನೆ'' ಎಂದು ಹೇಳಿದ್ದಾರೆ.
ಹಾಗೆಯೇ ''ಸಂಗೊಳ್ಳಿ ರಾಯಣ್ಣನ ಪ್ರತಿಮೆಸ್ಥಾಪನೆಯನ್ನು ಬಿಜೆಪಿ ಸರ್ಕಾರ ನಿರ್ಲಕ್ಷದಿಂದ ವಿವಾದ ಮಾಡಿಕೊಂಡಿದೆ ಎಂದು ಆರೋಪಿಸಿದ'' ಅವರು, ''ನೆಲ,ಜಲ,ಭಾಷೆ ಮತ್ತು ನಾಡಿನ ಹೆಮ್ಮೆಯ ವ್ಯಕ್ತಿತ್ವಗಳ ವಿಷಯದಲ್ಲಿ ರಾಜಿ ಸಲ್ಲದು. ಕನ್ನಡ ಸಂಘಟನೆಗಳು ಮತ್ತು ರಾಯಣ್ಣ ಅಭಿಮಾನಿಗಳು ಕೂಡಾ ಸಂಯಮದಿಂದ ವರ್ತಿಸಿ ವಿವಾದ ಇತ್ಯರ್ಥಕ್ಕೆ ಸಹಕರಿಸಬೇಕು'' ಎಂದು ಮನವಿ ಮಾಡಿದ್ದಾರೆ.