ನವದೆಹಲಿ, ಆ 28(DaijiworldNews/HR): ಏರೋ ಇಂಡಿಯಾದ ಮುಂದಿನ ಆವೃತ್ತಿಯ ಸಂಬಂಧ ರಕ್ಷಣಾ ಸಚಿವಾಲಯವು ತಾತ್ವಿಕ ನಿರ್ಧಾರವನ್ನು ತೆಗೆದುಕೊಂಡಿದ್ದು ಏಷ್ಯಾದ ಅತಿದೊಡ್ಡ ಏರೋ ಪ್ರದರ್ಶನವಾಗಿರುವ ಏರೋ ಇಂಡಿಯಾ ತನ್ನ ಪಾರಂಪರಿಕ ತಾಣವಾಗಿರುವ ಬೆಂಗಳೂರಿನಲ್ಲಿ ಮುಂದಿನ ವರ್ಷ ಫೆಬ್ರವರಿ 3ರಿಂದ 5ರನಡುವೆ ನಡೆಯಲಿದೆ ಎಂದು ಅಧಿಕೃತ ಮೂಲಗಳು ಹೇಳಿದೆ.
ದೇಶದ ರಕ್ಷಣಾ ಉದ್ಯಮ ಹಾಗೂ ಜಾಗತಿಕ ವೈಮಾನಿಕ ಸಂಸ್ಥೆಗಳ ಒತ್ತಾಸೆಯ ಮೇರೆಗೆ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ವೈಮಾನಿಕ ಪ್ರದರ್ಶನ ನಡೆಸಲು ಸಚಿವಾಲಯ ನಿರ್ಧಾರ ಕೈಗೊಂಡಿದೆ.
ಈ ಕಾರ್ಯಕ್ರಮದ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈಗಾಗಲೇ ಹಲವಾರು ಆಂತರಿಕ ಸಭೆಗಳನ್ನು ನಡೆಸಿದ್ದು, ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಗರಿಷ್ಠ ಮುನ್ನೆಚ್ಚರಿಕೆ ವಹಿಸುವುದರ ಜೊತೆಗೆ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ನಿರ್ಧರಿಸಲಾಗಿದೆ.
ಮೊದಲ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ 1996 ರಲ್ಲಿ ಪ್ರಾರಂಭವಾದಾಗಿನಿಂದ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.