ಪುಣೆ, ಆ. 28 (DaijiworldNews/MB) : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸೋಂಕಿತ ವೃದ್ದನನ್ನು ಆರೈಕೆ ಕೇಂದ್ರದಿಂದ ಆಸ್ಪತ್ರೆಗೆ ದಾಖಲಿಸಲು ವೈದ್ಯರೇ ಆಂಬುಲೆನ್ಸ್ ಚಲಾಯಿಸಿದ ಘಟನೆ ಪುಣೆಯಲ್ಲಿ ನಡೆದಿದ್ದು ಈ ವೈದ್ಯ ನಿಜವಾದ ಕೊರೊನಾ ವಾರಿಯರ್ ಎಂಬ ಜನಮನ್ನಣೆಗೆ ಪಾತ್ರರಾಗಿದ್ದಾರೆ.
ಆಂಬುಲೆನ್ಸ್ ಚಾಲಕನಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೊರೊನಾ ಸೋಂಕಿತ 71 ವರ್ಷದ ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಲು ಯಾರೂ ಇರಲಿಲ್ಲ. ಈ ಸಂದರ್ಭದಲ್ಲಿ ತುರ್ತು ಚಿಕಿತ್ಸೆಯ ಅನಿವಾರ್ಯತೆಯನ್ನು ಮನಗಂಡ ವೈದ್ಯ ರಂಜೀತ್ ನಿಕಮ್ ಅವರು ಕೂಡಲೇ ತಾವೇ ಆಂಬುಲೆನ್ಸ್ ಚಲಾಯಿಸಲು ಮುಂದಾಗಿದ್ದಾರೆ. ಹಾಗೆಯೇ ಅವರಿಗೆ ವೈದ್ಯ ರಾಜೇಂದ್ರ ರಾಜ್ಪುರೋಹಿತ್ ಅವರು ಜೊತೆಯಾದರು.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿರುವ ನಿಕಮ್ ಅವರು, ''ಕೋವಿಡ್ ಕೇರ್ ಸೆಂಟರ್ನಲ್ಲಿ ಒಂದು ಆಂಬುಲೆನ್ಸ್ ಇದ್ದು ಚಾಲಕ ಕೆಲವೇ ಗಂಟೆಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಆ ಪರಿಸ್ಥಿತಿಯಲ್ಲಿ ಅವರು ಆಂಬುಲೆನ್ಸ್ ಚಲಾಯಿಸುವುದು ಸಾಧ್ಯವಿರಲಿಲ್ಲ. ಆದ್ದ ಕಾರಣ ನಾವು '108' ತುರ್ತು ಆಂಬುಲೆನ್ಸ್ ಸೇವೆಗೆ ಕರೆ ಮಾಡಿದೆವು. ಆದರೆ ಸಂಪರ್ಕ ಸಿಗಲಿಲ್ಲ. ಬೇರೊಬ್ಬ ಚಾಲಕನಿಗೂ ಹೇಳಿದೆವು ಅವರು ಕೂಡಾ ಬರಲಾಗಿಲ್ಲ. ತುರ್ತು ಸಂದರ್ಭವಾದ ಕಾರಣ ನಾನೇ ಆಂಬುಲೆನ್ಸ್ ಚಲಾಯಿಸಿದೆ'' ಎಂದು ತಿಳಿಸಿದ್ದಾರೆ.