ನವದೆಹಲಿ, ಆ 29 (DaijiworldNews/PY): ಕೊರೊನಾ ಕಾರಣದ ಹಿನ್ನಲೆ ಮುಂದೂಡಿರುವ ಸಂಸತ್ನ ಮುಂಗಾರು ಅಧಿವೇಶನ ಸೆ.14ರಿಂದ ಅ.1ರವರೆಗೆ ನಡೆಯಲಿದೆ.
ಉಭಯ ಸದನಗಳಲ್ಲಿ ಒಟ್ಟು 18 ಕಲಾಪಗಳು ನಡೆಯಲಿದ್ದು, ದಿನವೂ 4 ಗಂಟೆಗಳ ಕಾಲ ಪ್ರತಿ ಸದನ ನಡೆಯಲಿದೆ. ರಾಜ್ಯ ಸಭೆಯ ಅಧಿವೇಶನ ದಿನದ ಪ್ರಾರಂಭದ 4 ಗಂಟೆಯ ನಂತರ 4 ಗಂಟೆಗಳ ಕಾಲ ಲೋಕಸಭೆಯ ಕಲಾಪಗಳು ನಡೆಯಲಿವೆ.
ಯಾವುದೇ ವಿರಾಮಗಳಿಲ್ಲದೆ ಒಟ್ಟು 18 ಕಲಾಪಗಳು ನಡೆಯುತ್ತವೆ. ಅಲ್ಲದೇ, ವಾರಾಂತ್ಯದಲ್ಲಿ ಸಂಸದರು ಬೇರೆ ಸ್ಥಳಗಳಿಗೆ ಹೋಗುವಂತ ಸಾಧ್ಯತೆಗಳು ಇರುತ್ತವೆ. ಈ ಹಿನ್ನೆಲೆ ಸೋಂಕು ಕೂಡಾ ಹೆಚ್ಚಾಗುವ ಸಾಧ್ಯತೆ ಇದೆ. ವಾರಾಂತ್ಯದಲ್ಲಿ ರಜೆ ನೀಡಿದರೆ ಅಧಿವೇಶನವನ್ನು ಅ.1ರಬಳಿಕವೂ ಮಾಡಬೇಕಾಗುತ್ತದೆ. ಹಾಗಾಗಿ ಇಂತಹ ಸನ್ನಿವೇಶದ ಸಂದರ್ಭ ಕಲಾಪವನ್ನು ವಿಸ್ತರಣೆ ಮಾಡುವುದು ಸೂಕ್ತವಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಮುಂಗಾರು ಅಧಿವೇಶನ ಆರಂಭವಾಗುವ 72 ಗಂಟೆಗಳ ಮೊದಲು ಎಲ್ಲಆ ಸಂಸದರು ಸೇರಿದಂತೆ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ಇನ್ನು ಅಧಿವೇಶನ ವೇಳೆ ಲಡಾಖ್ ಗಡಿ ಬಿಕ್ಕಟ್ಟು ಸೇರಿದಂತೆ ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳು ಕೊರೊನಾ ಬಿಕ್ಕಟ್ಟಿನ ನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಕೇಳಲು ಕಾಂಗ್ರೆಸ್ ತಂತ್ರ ರೂಪಿಸಿದೆ.