ಪುಲ್ವಾಮ, ಆ 29(DaijiworldNews/HR):ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಮತ್ತೆ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದ ಘಟನೆ ಇಂದು ನಡೆದಿದೆ.
ಜಮ್ಮು ಕಾಶ್ಮೀರ ಪೊಲೀಸ್, ಭಾರತೀಯ ಸೇನೆ, ಸಿಆರ್ ಪಿಎಫ್ ಜಂಟಿ ಕಾರ್ಯಾಚರಣೆಯ ಪರಿಣಾಮವಾಗಿ ಪುಲ್ವಾಮದಲ್ಲಿನ ಝಡೂರ ಪ್ರದೇಶದಲ್ಲಿ ಉಗ್ರರನ್ನು ಎನ್ ಕೌಂಟರ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಗುಂಡಿನ ಚಕಮಕಿಯಲ್ಲಿ ಒಬ್ಬ ಭಾರತೀಯ ಸೇನಾ ಸಿಬ್ಬಂದಿಗೆ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎನ್ ಕೌಂಟರ್ ನಡೆದ ಸ್ಥಳದಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತರಾಗಿರುವ ಉಗ್ರರು ಯಾವ ಸಂಘಟನೆಯವರು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಆ. 29ರ ರಾತ್ರಿ 1 ಗಂಟೆಗೆ ಈ ಗುಂಡಿನ ಚಕಮಕಿ ಪ್ರಾರಂಭವಾಗಿದೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಮುಂಚೆ ಆ.28 ರಂದು ನಾಲ್ವರು ಉಗ್ರರನ್ನು ಎನ್ ಕೌಂಟರ್ ಮಾಡಲಾಗಿತ್ತು. ಹಾಗಾಗಿ ಈ ವರ್ಷ ಹತರಾಗಿರುವ ಭಯೋತ್ಪಾದಕರ ಸಂಖ್ಯೆ 153 ಕ್ಕೆ ಏರಿಕೆಯಾಗಿದೆ.