ನವದೆಹಲಿ, ಆ 29 (DaijiworldNews/PY): ಬಿಜೆಪಿಯ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಕೇಂದ್ರ ಹಣಕಾಸು ಸಚಿವೆ ಅವರ ವಿರುದ್ದ ವಾಗ್ದಾಳಿ ನಡೆಸಿದ್ದು, ಶೀಘ್ರವೇ ಅವರ ಹೇಳಿಕೆಯ ವಿಡಿಯೋವನ್ನು ಪೋಸ್ಟ್ ಮಾಡುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಕೊರೊನಾ ಕಾರಣದಿಂದ ಕುಸಿದ ಜಿಎಸ್ಟಿ ಸಂಗ್ರಹಕ್ಕೆ ದೇವರ ಆಟ ಎಂದಿದ್ದಾರೆ. ಆದರೆ, ಜಿಡಿಪಿ ವಾರ್ಷಿಕ ಬೆಳವಣಿಗೆ ದರದಲ್ಲಿ ಹಣಕಾಸು ವರ್ಷ 2015ರ ಶೇ.8ರಿಂದ ಕೊರೊನಾ ಪೂರ್ವ 2020ರ ಮೊದಲ ತ್ರೈಮಾಸಿಕದಲ್ಲಿ ಶೇ.3.1ಕ್ಕೆ ಇಳಿಕೆ ಕಾಣಲು ಕೂಡಾ ದೇವರ ಆಟವೇ ಕಾರಣವೇ ಎಂದು ಕೇಳಿದ್ದಾರೆ.
ಕೊರೊನಾ ವೈರಸ್ನಿಂದ ಬಿಕ್ಕಟ್ಟು ಉಂಟಾದ ಹಿನ್ನೆಲೆ ದೇಶದಾದ್ಯಂತ ಜಿಎಸ್ಟಿ ತೆರಿಗೆ ಮೇಲೆ ಪರಿಣಾಮವಾಗಿದ್ದು, ರಾಜ್ಯಗಳಿಗೆ ಹೆಚ್ಚಿನ ಜಿಎಸ್ಟಿ ಪರಿಹಾರವನ್ನು ಕಲ್ಪಿಸಲು ಸಾಧ್ಯವಿಲ್ಲ. ಜಿಎಸ್ಟಿ ಕುಸಿತಕ್ಕೆ ಕೊರೊನಾ ಕಾರಣ. ಇದೆಲ್ಲಾ ದೇವರ ಆಟ ಎಂದು ಶುಕ್ರವಾರ ಆನ್ಲೈನ್ ಮೂಲಕ ನಡೆದ 41ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
2019-20ನೇ ಹಣಕಾಸು ವರ್ಷದಲ್ಲಿ 1.65 ಲಕ್ಷ ಕೋಟಿಗೂ ಹೆಚ್ಚು ಜಿಎಸ್ಟಿ ಪರಿಹಾರ ಹಣವನ್ನು ಈಗಾಗಲೇ ರಾಜ್ಯಗಳಿಗೆ ನೀಡಲಾಗಿದೆ. ಅಲ್ಲದೇ, 97 ಸಾವಿರ ಕೋಟಿ.ರೂ ಪರಿಹಾರ ಹಣದ ಕೊರತೆಯಾಗುವ ಸಾಧ್ಯತೆ ಇದೆ ಎಂಬುದಾಗಿ ಹಣಾಕಾಸು ಇಲಾಖೆಯ ಅಧಿಕಾರಿಗಳು ತಿಳಿಸಿದ್ದರು.