ಬೆಂಗಳೂರು, ಆ 29 (DaijiworldNews/PY): ತಾಯಿ ಹಾಗೂ ಅಜ್ಜಿ ಸೇರಿ 2 ವರ್ಷದ ಮಗುವಿಗೆ ಬಾಯಿಗೆ ಪ್ಲಾಸ್ಟರ್ ಹಾಕಿ, ಹೊಟ್ಟೆ, ಮುಖಕ್ಕೆ ಗುದ್ದಿ ಚಿತ್ರಹಿಂಸೆ ನೀಡಿರುವ ಘಟನೆ ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ನಡೆದಿದೆ.
ಗುರಪ್ಪನಪಾಳ್ಯದಲ್ಲಿ ವಾಸವಿರುವ ಇಮ್ರಾನ್ ಪಾಷಾ ಹಾಗೂ ಅಜೀರಾ ದಂಪತಿಗೆ ನಾಲ್ಕು ಮಕ್ಕಳಿದ್ದು, ಮತ್ತೊಂದು ಮಗುವಿನ ಹೆರಿಗೆ ಮಗುವಿನ ತಾಯಿ ತನ್ನ ತಾಯಿ ಮನೆಗೆ ಬಂದಿದ್ದು, ಈ ವೇಳೆ ತನ್ನ 2 ವರ್ಷದ ಮಗುವಿನ ಮೇಲೆ ಅಜ್ಜಿ ಹಾಗೂ ತಾಯಿ ಸೇರಿ ಹಲ್ಲೆ ನಡೆಸಿದ್ದಾರೆ.
ಈ ಮಗುವಿಗೆ ಕಳೆದ 15 ದಿನಗಳಿಂದಲೂ ಹಲ್ಲೆ ಮಾಡುತ್ತಿದ್ದಾರೆ. ಅಲ್ಲದೇ, ಇದರೊಂದಿಗೆ ಮಗುವಿನ ಬಾಯಿಗೆ ಪ್ಲಾಸ್ಟರ್ ಹಾಕಿ, ಹೊಟ್ಟೆಗೆ ಹಾಗೂ ಮುಖಕ್ಕೆ ಗುದ್ದಿ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಮಗು ಅಳುವುದನ್ನು ನಿಲ್ಲಿಸುತ್ತಿಲ್ಲ ಎನ್ನುವ ಕಾರಣಕ್ಕೆ ಮೇಣದ ಬತ್ತಿಯಿಂದ ಮಗುವಿನ ಕೈಗೆ ಸುಟ್ಟು ಹಿಂಸೆ ಮಾಡಿದ್ದಾರೆ.
ಇಮ್ರಾನ್ ಪಾಷಾ ಹಾಗೂ ಅಜೀರಾ ಪ್ರೀತಿಸಿ ಮದುವೆಯಾಗಿದ್ದು, ಈ ವಿಚಾರ ಅಜೀರಾ ತಾಯಿ ಮುಬೀರಾಗೆ ಇಷ್ಟವಿರಲಿಲ್ಲ. ಈ ವಿಚಾರಕ್ಕಾಗಿ ಮುಬೀನಾ ಹಾಗೂ ಇಮ್ರಾನ್ ಪಾಷಾ ನಡುವೆ ಅಷ್ಟಕಷ್ಟೆ. ಇದಾದ ನಂತರ ಅಜೀರಾ ಹೆರಿಗೆಗೆಂದು ತನ್ನ ತಾಯಿ ಮನೆಗೆ ಬಂದಿದ್ದಾಳೆ. ಈ ಸಂದರ್ಭ 2 ವರ್ಷದ ಮಗು ತನಗೆ ಅಪ್ಪ ಬೇಕು ಎಂದು ಹಠ ಮಾಡಿದ್ದು, ಈ ಕಾರಣಕ್ಕೆ ಮಗುವಿಗೆ ಅಜ್ಜಿ ಹಾಗೂ ತಾಯಿ ಸೇರಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ.
ಹಲ್ಲೆ ಮಾಡಿದ ಪರಿಣಾಮ ಮಗುವಿನ ಕಣ್ಣಿಗೆ ಗಾಯವಾಗಿದ್ದು, ಮಗುವನ್ನು ಇಂದಿರಾಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಗ್ಗೆ ಇಮ್ರಾನ್ ಪಾಷಾ, ಆತನ ಪತ್ನಿ ಅಜೀರಾ ಹಾಗೂ ಅತ್ತೆ ಮುಬೀನಾ ವಿರುದ್ದ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆಯ ನಂತರ ಮಹಿಳೆಯರು ಪರಾರಿಯಾಗಿದ್ದು, ಪೊಲೀಸರು ಮಹಿಳೆಯರನ್ನು ಬಂಧಿಸಿದ್ದಾರೆ.