ನವದೆಹಲಿ, ಆ 29(DaijiworldNews/HR): ಅಕ್ರಮವಾಗಿ ಮೊಬೈಲ್ ಕರೆಗಳನ್ನು ರವಾನಿಸಿ ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಅಧಿಕಾರಿಯೊಬ್ಬರ ಪತ್ನಿಗೆ ಸಹಕರಿಸಿದ್ದ ಎನ್ಐಎ ಮಾಜಿ ಅಧಿಕಾರಿ ಜಲಜ್ ಶ್ರೀವಾತ್ಸವ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ಉದ್ಯಮಿ ಒಬ್ಬರಿಂದ 1.5 ಲಕ್ಷ ರೂ. ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ 2018ರಲ್ಲಿ ಕಾನ್ಪುರ ವಿಭಾಗದಲ್ಲಿಆಗ ಜಿಎಸ್ಟಿ ಕಮಿಷನರ್ ಆಗಿದ್ದ ಸಂಸಾರ್ ಚಾಂದ್ ಹಾಗೂ ಅವರ ಪತ್ನಿ ಅವನೀಶ್ ಕೌರ್ ಅವರನ್ನು ಬಂಧಿಸಿತ್ತು.
ಪ್ರಕರಣದಿಂದ ಪಾರಾಗಲು ಅವನೀಶ್ಕೌರ್, ಸುದೇಶ್ ಸೈನಿ ಎಂಬುವರ ಮೊಬೈಲ್ ದೂರವಾಣಿ ಕರೆಗಳ ವಿವರಗಳನ್ನು ತಮಗೆ ಒದಗಿಸುವಂತೆ ಜಲಜ್ ಶ್ರೀವಾತ್ಸವ ಅವರನ್ನು ಕೋರಿದ್ದರು. ಅದರಂತೆ ಶ್ರೀವಾತ್ಸವ ಅವರು 2017 ಹಾಗೂ 2018ರಲ್ಲಿ ಸುದೇಶ್ ಸೈನಿ ಎಂಬ ವ್ಯಕ್ತಿ ನಡೆಸಿದ್ದರು ಎನ್ನಲಾದ ದೂರವಾಣಿ ಕರೆಗಳ ವಿವರಗಳನ್ನು ಪಡೆದುಕೊಂಡು ಅದನ್ನು ಕೌರ್ ಅವರಿಗೆ ನೀಡಿದ್ದರು. ಇದೀಗ ಈ ಕುರಿತು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸಿಬಿಐ ಶ್ರೀವಾತ್ಸವ್ ಅವರ ವಿರುದ್ಧ ಪ್ರಕರಣ ದಾಖಲಿಸಿದೆ.