ನವದೆಹಲಿ, ಆ. 29 (DaijiworldNews/MB) : ಕೊರೊನಾ ಸಾಂಕ್ರಾಮಿಕ ಹಾಗೂ ದೇಶದ ಆರ್ಥಿಕತೆ ಕುಸಿತ ದೇವರ ಆಟ ಎಂಬ ಹೇಳಿಕೆ ನೀಡಿ ಭಾರೀ ಸುದ್ದಿಯಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಲೇವಡಿ ಮಾಡಿರುವ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರು, ಕೊರೊನಾಗಿಂತ ಮೊದಲು ದೇಶದಲ್ಲಿ ಆದ ಆರ್ಥಿಕ ಅಸಮರ್ಪಕತೆಯನ್ನು ಹೇಗೆ ವಿವರಿಸಬಹುದು ದೇವರ ಸಂದೇಶವಾಹಕರಾದ ವಿತ್ತ ಸಚಿವೆ ಉತ್ತರಿಸಬಹುದೇ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಡಿರುವ ಅವರು, ''ಕೊರೊನಾ ಸಾಂಕ್ರಾಮಿಕವು ದೇವರ ಆಟವಾಗಿದ್ದರೆ, ಭಾರತದಲ್ಲಿ ಕೊರೊನಾ ಬರುವುದಕ್ಕೂ ಮೊದಲು 2017-18 2018-19 ಮತ್ತು 2019-20ರ ಅವಧಿಯಲ್ಲಿ ಉಂಟಾದ ಆರ್ಥಿಕ ಅಸಮರ್ಪಕತೆಯನ್ನು ಹೇಗೆ ವಿವರಿಸಬಹುದು ಎಂದು ಪ್ರಶ್ನಿಸಿದ್ದು ದೇವರ ಸಂದೇಶವಾಹಕರಾದ ವಿತ್ತ ಸಚಿವೆ ಉತ್ತರಿಸಬಹುದೇ'' ಎಂದು ಟಾಂಗ್ ನೀಡಿದ್ದಾರೆ.
41ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ''ಕೊರೊನಾ ವೈರಸ್ನಿಂದ ಬಿಕ್ಕಟ್ಟು ಉಂಟಾದ ಹಿನ್ನೆಲೆ ದೇಶದಾದ್ಯಂತ ಜಿಎಸ್ಟಿ ತೆರಿಗೆ ಮೇಲೆ ಪರಿಣಾಮವಾಗಿದ್ದು, ರಾಜ್ಯಗಳಿಗೆ ಹೆಚ್ಚಿನ ಜಿಎಸ್ಟಿ ಪರಿಹಾರವನ್ನು ಕಲ್ಪಿಸಲು ಸಾಧ್ಯವಿಲ್ಲ. ಜಿಎಸ್ಟಿ ಕುಸಿತಕ್ಕೆ ಕೊರೊನಾ ಕಾರಣ. ಇದೆಲ್ಲಾ ದೇವರ ಆಟ'' ಎಂದು ಹೇಳಿದ್ದರು.