ಬೆಂಗಳೂರು, ಆ. 29 (DaijiworldNews/MB) : ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ದೊಡ್ಡ ಪ್ರಮಾಣದಲ್ಲಿದ್ದು ಮೊನ್ನೆ ಪತ್ತೆಯಾಗಿರುವುದು ಬರಿ ಸ್ಯಾಂಪಲ್ ಅಷ್ಟೇ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದ್ದಾರೆ.
ಇಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ 1.30 ಕೋಟಿ ಜನಸಂಖ್ಯೆ ಇದ್ದು ಯಾವ ಏರಿಯಾ, ಅಪಾರ್ಟ್ಮೆಂಟ್ನಲ್ಲಿ ಏನು ನಡೆಯುತ್ತದೆ ಎಂದು ತಿಳಿಯುವುದಿಲ್ಲ. ಅದಕ್ಕಾಗಿಯೇ ಕಣ್ಗಾವಲು ಇಡಬೇಕಾಗಿದ್ದು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಡ್ರಗ್ಸ್ ದಂಧೆಗೆ ಕಡಿವಾಣ ಹಾಕದಿದ್ದರೆ ಬಹಳಷ್ಟು ಅಮಾಯಕರು ಬಲಿಯಾಗುತ್ತಾರೆ ಎಂದು ಹೇಳಿದರು.
ಇನ್ನು ಡ್ರಗ್ಸ್ ದಂಧೆಯಲ್ಲಿ ಚಿತ್ರರಂಗದವರು ಹಾಗೂ ರಾಜಕಾರಣಿಗಳ ಮಕ್ಕಳ ಹೆಸರು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಬಹಳ ದುಬಾರಿಯಾಗಿದ್ದು ಹಣ ಇರುವವರೇ ಈ ಜಾಲಕ್ಕೆ ಬಲಿಯಾಗುತ್ತಾರೆ ಎಂದು ಹೇಳಿದ್ದಾರೆ.
ಶಾಲಾ– ಕಾಲೇಜುಗಳ ಕಾಂಪೌಂಡ್ಗಳ ಹಿಂದೆ ದಂಧೆ ನಡೆಯುತ್ತದೆ ಎಂದು ತಿಳಿದು ಬಂದಿದೆ. ಅದರ ಬಗ್ಗೆ ನಿಗಾ ವಹಿಸಲಾಗುವುದು. ಶಾಲಾ–ಕಾಲೇಜುಗಳ ಪುನರಾರಂಭ ಮಾಡಿದ ಬಳಿಕ ಈ ದಂಧೆಕೋರರ ಚಲನವಲನಗಳನ್ನು ಪರಿಶೀಲನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಹಾಗೆಯೇ ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ತೆರೆಯಲು ಮುಂದಿನ ತಿಂಗಳಿಂದ ಅನುಮತಿ ದೊರೆಯುವ ಸಾಧ್ಯತೆ ಇದೆ ಎಂದು ಇದೇ ವೇಳೆ ತಿಳಿಸಿದ್ದಾರೆ.