ಲಖನೌ, ಆ 29(DaijiworldNews/HR): ರಾಜ್ಯಸಭೆ ಪ್ರತಿಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ನಸೀಬ್ ಪಠಾಣ್ ಆಗ್ರಹಿಸಿದ್ದಾರೆ.
ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪಕ್ಷದ ಕೆಲವು ನಾಯಕರು ಬರೆದಿರುವ ಪತ್ರದಿಂದ ನೋವಾಗಿದೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸೋನಿಯಾ ಹೇಳಿದ್ದರು. ಆದರೆ, ಈಗ ಪ್ರಕರಣ ಅಂತ್ಯವಾಗಿದೆ. ಆದರೆ ಇದಾದ ಬಳಿಕವೂ ಆಜಾದ್ ಮಾಧ್ಯಮದವರ ಬಳಿ ಮಾತನಾಡಿದ್ದರು ಮತ್ತು ಆ ಬಗ್ಗೆ ಮರುದಿನ ಫೇಸ್ಬುಕ್ನಲ್ಲಿಯೂ ಪೋಸ್ಟ್ ಮಾಡಿದ್ದರು ಎಂದು ನಸೀಬ್ ಪಠಾಣ್ ಹೇಳಿದ್ದಾರೆ.
ಆಜಾದ್ ಅವರು ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆ ಆದಕಾರಣ ಅವರನ್ನು ಸ್ವತಂತ್ರಗೊಳಿಸಬೇಕು ಹಾಗೂ ಪಕ್ಷದಿಂದ ಉಚ್ಚಾಟಿಸಬೇಕು' ಎಂದು ಅವರು ಹೇಳಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವನ್ನೂ ಬಿಡುಗಡೆ ಮಾಡಿದ್ದಾರೆ.
ಇನ್ನು ಕಾಂಗ್ರೆಸ್ ಪಕ್ಷದ ನಾಯಕತ್ವದಲ್ಲಿ ಸುಧಾರಣೆಗೆ ಒತ್ತಾಯಿಸಿ 23 ಕಾಂಗ್ರೆಸ್ ನಾಯಕರು ಸೇರಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವುದು ಇತ್ತೀಚೆಗೆ ದೇಶದಾದ್ಯಂತ ಚರ್ಚೆಯಾಗುತ್ತಿದ್ದು, ಪತ್ರಕ್ಕೆ ಸಹಿ ಹಾಕಿದವರಲ್ಲಿ ಆಜಾದ್ ಸಹ ಒಬ್ಬರಾಗಿದ್ದಾರೆ ಎಂದು ತಿಳಿಸಿದ್ದಾರೆ.