ಬೆಂಗಳೂರು, ಆ. 29 (DaijiworldNews/MB) : ಇತ್ತೀಚೆಗೆ ಮೈಸೂರು ಹುಲಿ ಟಿಪ್ಪುಸುಲ್ತಾನ್ ವೀರ, ಈ ಮಣ್ಣಿನ ಮಗ ಎನ್ನುವ ಮೂಲಕ ಸುದ್ದಿಯಾಗಿದ್ದ ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಎಚ್.ವಿಶ್ವನಾಥ್ ಶನಿವಾರ ಮೌನಕ್ಕೆ ಶರಣಾಗಿದ್ದು ಮಾಧ್ಯಮದವರಿಗೆ, ''ಈ ಹೊತ್ತು ಏಕಾದಶಿ, ಮೌನ ನಾಳೆ ಮಾತಾಡೋಣ'' ಎಂದು ಡೈರಿಯಲ್ಲಿ ಬರೆದು ಪ್ರದರ್ಶಿಸಿದ್ದಾರೆ.
ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಶನಿವಾರ ಡಾ.ಶ್ರೀರಾಜೇಂದ್ರ ಸ್ವಾಮೀಜಿಗಳ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೊರ ಬಂದ ಅವರನ್ನು ಮಾಧ್ಯಮದವರು ಪ್ರಶ್ನಿಸಲು ಹೋದ ಸಂದರ್ಭದಲ್ಲಿ ಕೂಡಲೇ ಡೈರಿಯಲ್ಲಿ ಈ ಹೊತ್ತು ಏಕಾದಶಿ, ಮೌನ ನಾಳೆ ಮಾತಾಡೋಣ ಎಂದು ಬರೆದು ಅದನ್ನು ಪ್ರದರ್ಶಿಸಿದ್ದು ಕಾರು ಹತ್ತಿ ಹೋಗಿದ್ದಾರೆ.
ಕಾಂಗ್ರೆಸ್ನಿಂದ ಬಿಜೆಪಿಗೆ ಹೋಗಿರುವ ವಿಶ್ವನಾಥ್ ಅವರು, ಇತ್ತೀಚೆಗೆ ಮೈಸೂರು ಹುಲಿ ಟಿಪ್ಪುಸುಲ್ತಾನ್ ವೀರ, ಈ ಮಣ್ಣಿನ ಮಗ ಎಂದು ಹೇಳಿದ್ದು ಇದರಿಂದಾಗಿ ಬಿಜೆಪಿ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದರು. ವಿಶ್ವನಾಥ್ ಅವರು ಬಿಜೆಪಿ ಸಿದ್ದಾಂತಕ್ಕೆ ತಕ್ಕಂತೆ ಇರಬೇಕು ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.