ನವದೆಹಲಿ, ಆ 29(DaijiworldNews/HR): ಫೇಸ್ಬುಕ್ ಮೇಲೆ ಬಿಜೆಪಿ ಹಿಡಿತ ಸಾಧಿಸಿದೆ ಎಂಬ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಪ್ರಸಿದ್ದ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಪ್ ಬಗೆಗೆ ಮಾತನಾಡಿದ್ದಾರೆ. ವಾಟ್ಸಪ್ ಮೇಲೆ ಬಿಜೆಪಿಗೆ ಹಿಡಿತವಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿ, ಭಾರತದಲ್ಲಿ ವಾಟ್ಸಪ್ ತನ್ನ ಪಾವತಿ ಸೇವೆಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದ ಅನುಮೋದನೆ ಬೇಕಿದೆ ಎಂದು ಹೇಳಿದ್ದಾರೆ.
40 ಕೋಟಿ ಭಾರತೀಯರು ವಾಟ್ಸಪ್ ಅನ್ನು ಬಳಸುತ್ತಿದ್ದಾರೆ. ಮೋದಿ ಸರ್ಕಾರದ ಅನುಮೋದನೆ ಸಿಕ್ಕೊಡನೆ ವಾಟ್ಸಪ್ ಭಾರತದಲ್ಲಿ ತನ್ನ ಪಾವತಿ ಸೇವೆ ಪ್ರಾರಂಭಕ್ಕೆ ಮುಂದಾಗಲಿದೆ. ಅಲ್ಲದೆ ಸರ್ಕಾರ ಮುಂದಿನ ದಿನಗಳಲ್ಲಿ ಸರ್ಕಾರದ ಅನುಮೋದನೆ ಅಗತ್ಯವಿರುವ ಪಾವತಿಗಳನ್ನು ಮಾಡಲು ವಾಟ್ಸಪ್ ಬಳಸಬೇಕೆಂದು ಬಯಸಿದೆ. ಹೀಗಾಗಿ, ವಾಟ್ಸಪ್ ಮೇಲೆ ಬಿಜೆಪಿಗೆ ಹಿಡಿತವಿದೆ" ಎಂದು ಮಾಧ್ಯಮ ವರದಿಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ .
ಆಗಸ್ಟ್ 16 ರಂದು ರಾಹುಲ್ ದೇಶದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಫೇಸ್ಬುಕ್ ಮತ್ತು ವಾಟ್ಸಪ್ ಅನ್ನು ನಿಯಂತ್ರಿಸುತ್ತಿದೆ ಎಂದು ಆರೋಪಿಸಿದ್ದರು. ಮತದಾರರ ಮೇಲೆ ಪ್ರಭಾವ ಬೀರಲು ಈ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ನಕಲಿ ಸುದ್ದಿ ಮತ್ತು ದ್ವೇಷ ಸಂದೇಶ ಹರಡುತ್ತಿದ್ದಾರೆ ಎಂದು ಹೇಳಿದ್ದರು.