ನವದೆಹಲಿ, ಆ 29(DaijiworldNews/HR): ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊರೊನಾದಿಂದ ಗುಣಮುಖರಾಗಿದ್ದು, ಶೀಘ್ರದಲ್ಲಿಯೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ- ಏಮ್ಸ್ ತಿಳಿಸಿದೆ.
ಆಗಸ್ಟ್ 2 ರಂದು ಅಮಿತ್ ಶಾಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ನಂತರ ಆಗಸ್ಟ್ 14 ರಂದು ನೆಗೆಟಿವ್ ವರದಿಯಾಗಿತ್ತು.ಆದಾಗಿ ಸೋಂಕಿನಿಂದ ಗುಣಮುಖರಾದ ಬಳಿಕವೂ ವೈದ್ಯಕೀಯ ಆರೈಕೆಗಾಗಿ ಆಗಸ್ಟ್ 18 ರಂದು ಆಸ್ಪತ್ರೆಗೆ ದಾಖಲಾಗಿದ್ದರು.
ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದರೂ ವೈದ್ಯಕೀಯ ಆರೈಕೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅಮಿತ್ ಶಾ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದ್ದಾರೆ ಎಂದು ಏಮ್ಸ್ ಮಾಧ್ಯಮ ಮತ್ತು ಶಿಷ್ಟಾಚಾರ ವಿಭಾಗದ ಮುಖ್ಯಸ್ಥೆ ಡಾ. ಅರ್ತಿ ವಿಜ್ ತಿಳಿಸಿದ್ದಾರೆ.
ಇನ್ನು ಕಳೆದ 4 ದಿನಗಳಿಂದ ಆಯಾಸ ಹಾಗೂ ದೇಹ ನೋವು ಕಾಣಿಸಿಕೊಂಡಿರುವ ಅಮಿತ್ ಶಾ ಅವರಿಗೆ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಇದೀಗ ಅವರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ತನ್ನ ಕೆಲಸವನ್ನು ಮುಂದುವರೆಸಿದ್ದಾರೆ ಎಂದು ಹೇಳಿದ್ದಾರೆ.