ಚಿಕ್ಕಮಗಳೂರು, ಆ. 30 (DaijiworldNews/MB) : ಸ್ಯಾಂಡಲ್ವುಡ್ನಲ್ಲಿ ಕೆಲವು ನಟ, ನಟಿ, ನಿರ್ದೇಶಕರಿಗೆ ಡ್ರಗ್ಸ್ ದಂಧೆಯ ನಂಟಿದೆ ಎಂದು ಹೇಳಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ತಮಗೆ ತಿಳಿದಿರುವ ಮಾಹಿತಿ ನೀಡಲಿ, ನಾವು ಅವರರಿಗೆ ರಕ್ಷಣೆ ನೀಡುತ್ತೇವೆ, ಅದು ನಮ್ಮ ಹೊಣೆ ಎಂದು ಸಚಿವ ಸಿ.ಟಿ. ರವಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಇಂದ್ರಜೀತ್ ಅವರನ್ನು ಮನವಿ ಮಾಡಿರುವ ಸಚಿವ ಸಿ.ಟಿ. ರವಿಯವರು, ''ಈ ತನಿಖೆಗೆ ಅವರ ಸಹಕಾರ ಅತ್ಯಗತ್ಯ. ಪೊಲೀಸ್ ಇಖಾಖೆ ಅವರಿಗೆ ರಕ್ಷಣೆ ನೀಡಲಿದ್ದು ಅವರಿಗೆ ಯಾರ ಭಯವೂ ಬೇಡ. ಮತ್ತಷ್ಟು ಯುವ ಜನರು ಈ ದಂಧೆಗೆ ಬಲಿಯಾಗುವುದನ್ನು ತಡೆಯಬೇಕಾದರೆ ಅವರು ತನಿಖೆಗೆ ಮಾಹಿತಿ ನೀಡಬೇಕು'' ಎಂದು ಹೇಳಿದ್ದಾರೆ.
ಗುರುವಾರ ಎನ್ಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಈ ಬೆನ್ನಲ್ಲೇ ಇಂದ್ರಜೀತ್ ಲಂಕೇಶ್ ಅವರು, ''ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾ ನಡೆಯುತ್ತಿದೆ. ಡಲ್ ವುಡ್ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದ್ದು ನನಗೆ ತಿಳಿದಿರುವ ಸ್ಟಾರ್ ನಟರು, ನಟರು ಯಾರೂ ಕೂಡಾ ಇದನ್ನು ನಡೆಸುತ್ತಿಲ್ಲ. ಆದರೆ ಇದ್ದಕ್ಕಿದ್ದಂತೆ ಪ್ರಚಾರ ಗಳಿಸಿದ ಯುವ ನಟ-ನಟಿಯರು ಈ ರೀತಿಯ ಪಾರ್ಟಿಗಳನ್ನು ಮಾಡುತ್ತಾರೆ. ಇದರಲ್ಲಿ ನಟಿಯರು ಹೆಚ್ಚಾಗಿ ಇದ್ದಾರೆ. ನನಗೆ ಭದ್ರತೆ ನೀಡಿದರೆ ಈ ಬಗ್ಗೆ ಹೇಳುತ್ತೇನೆ'' ಎಂದು ಹೇಳಿದ್ದರು.
ನಂತರ ಡ್ರಗ್ಸ್ ದಂಧೆ ಬಗ್ಗೆ ಮಾಹಿತಿ ನೀಡುವ ಮೂಲಕ ಡ್ರಗ್ಸ್ ದಂಧೆ ವಿರುದ್ದದ ಬೆಂಗಳೂರು ಪೊಲೀಸರ ಹೋರಾಟಕ್ಕೆ ಜೊತೆಯಾಗಿ ಎಂದು ಇಂದ್ರಜೀತ್ ಅವರಿಗೆ ಕೇಂದ್ರ ಅಪರಾಧ ವಿಭಾಗದ ಮಾದಕ ದ್ರವ್ಯ ನಿಗ್ರಹ ದಳ ನೋಟಿಸ್ ನೀಡಿದೆ.