ಲಖನೌ, ಆ. 30(DaijiworldNews/HR): ರೈಲ್ವೆ ಕಾರ್ಯನಿರ್ವಾಹಕ ನಿರ್ದೇಶಕರ ಪತ್ನಿ ಮತ್ತು ಮಗನನ್ನು ಅವರ ಅಪ್ರಾಪ್ತ ಮಗಳೇ ತಮ್ಮ ಮನೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಲಖನೌ ನ ಗೌತಂಪಳ್ಳಿ ಪ್ರದೇಶದಲ್ಲಿ ನಡೆದಿದೆ.
ಮೃತರನ್ನು ಮಾಲತಿ (48) ಮತ್ತು ಶರದ್ (19) ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ರೈಲ್ವೆ ಕಾಲೋನಿಯಲ್ಲಿರುವ ಮನೆಗೆ ಭೇಟಿ ನೀಡಿದಾಗ ತಾಯಿ ಮತ್ತು ಮಗ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಮೊದಲಿಗೆ ಇದು ದುಷ್ಕರ್ಮಿಗಳು ದಾಳಿ ನಡೆಸಿರಬಹುದು ಎಂದು ಲಕ್ನೋ ಪೊಲೀಸರು ಮಾಹಿತಿ ನೀಡಿದ್ದರು.
ಆ ಬಳಿಕ ಪ್ರಾಥಮಿಕ ತನಿಖೆಯಿಂದ ಅಪ್ರಾಪ್ತ ಬಾಲಕಿ ಗುಂಡು ಹಾರಿಸಿದ್ದಾಳೆ ಎಂದು ತಿಳಿದು ಬಂದಿದೆ. ಅಪರಾಧವನ್ನು ಆಕೆ ಕೂಡ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಈ ಅಪರಾಧಕ್ಕೆ ಬಳಸಿದ 0.22 ಬೋರ್ ಪಿಸ್ತೂಲ್ ಮತ್ತು ಮನೆಯಲ್ಲಿನ ಇತರ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ.