ಬೆಳಗಾವಿ, ಆ. 30 (DaijiworldNews/MB) : ಬೆಳಗಾವಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಪೀರನವಾಡಿಯಲ್ಲಿ ಸ್ಥಾಪನೆ ಮಾಡಿದ ಬಳಿಕ ಮರಾಠಿ ಪರ ಕಾರ್ಯಕರ್ತರು ಹಾಗೂ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳ ನಡುವೆ ನಡೆದ ಘರ್ಷಣೆಯ ಬಳಿಕ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ, ಅಬಕಾರಿ ಸಚಿವ ಹೆಚ್ ನಾಗೇಶ್, ಜಲ ಸಂಪನ್ಮೂಲ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಬೆಳಗಾವಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದು ಬಿಗಡಾಯಿಸಿದ್ದ ಪರಿಸ್ಥಿತಿ ಈಗ ಕೊಂಚ ಹದ್ದುಬಸ್ಥಿಗೆ ಬಂದಿದೆ.
ಮೂವರು ಸಚಿವರುಗಳು ಜನರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದು ಸಂಗೊಳ್ಳಿ ರಾಯಣ್ಣ ಮತ್ತು ಛತ್ರಪತಿ ಶಿವಾಜಿ ಇಬ್ಬರ ಪ್ರತಿಮೆಗೂ ಮಾಲಾರ್ಪಣೆ ಮಾಡಿ, ಈ ಇಬ್ಬರು ಕೂಡಾ ನಮ್ಮ ಇತಿಹಾಸದಲ್ಲಿ ಪ್ರಾಮುಖ್ಯತೆ ಹೊಂದಿರುವವರು ಎಂದು ಹೇಳಿದರು.
ನಮ್ಮ ನಾಡಿನ ಅತಿ ದೊಡ್ಡ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರು ಆಗಿದ್ದರೆ, ಮೊಘಲರ ವಿರುದ್ಧ ಹೋರಾಡಿ ಹಿಂದೂ ಸಮಾಜದ ಬೆನ್ನಿಗೆ ನಿಂತವರು ಛತ್ರಪತಿ ಶಿವಾಜಿ. ಸಂಗೊಳ್ಳಿ ರಾಯಣ್ಣ ಅವರಿಗೆ ಕಿತ್ತೂರು ರಾಣೆ ಚೆನ್ನಮ್ಮ ಮಾರ್ಗದರ್ಶನ ನೀಡಿದರೆ, ಶಿವಾಜಿ ಅವರೊಂದಿಗೆ ಅವರ ತಾಯಿ ಜಿಜಾಬಾಯಿ ಇದ್ದರು. ಈ ಇಬ್ಬರು ಕೂಡಾ ನಮ್ಮ ಇತಿಹಾಸದಲ್ಲಿ ಪ್ರಮುಖವಾದ ಸ್ಥಾನವನ್ನು ಹೊಂದಿದ್ದಾರೆ ಎಂದು ಹೇಳಿದರು.
ಇನ್ನು ವಿವಾದಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಒಟ್ಟು ಮೂರು ಕೇಸುಗಳನ್ನು ದಾಖಲಿಸಲಾಗಿದ್ದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಮಾತನಾಡಿ ಸಂಗೊಳ್ಳಿ ರಾಯಣ್ಣ ಅನುಯಾಯಿಗಳ ವಿರುದ್ಧ ದಾಖಲಿಸಿರುವ ಕೇಸನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.