ಬೆಂಗಳೂರು, ಆ 30 (DaijiworldNews/PY): ಅಳಿಯನ ಮೇಲಿನ ಕೋಪಕ್ಕೆ ತನ್ನ ಮೊಮ್ಮಗನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ ಮುದುಕಿಯನ್ನು ಇದೀಗ ಸುದ್ದಗುಂಟೆ ಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ವಾಸವಿರುವ ಅಜ್ಜಿ ತನ್ನ ಮೊಮ್ಮಗನಿಗೆ ಹಲ್ಲೆ ನಡೆಸಿದ್ದು, ಆ ಪುಟ್ಟ ಬಾಲಕನ ಕೈ ಹಾಗೂ ಮೈಮೇಲೆ ಸುಟ್ಟಿ, ಮನಬಂದಂತೆ ಚಿತ್ರಹಿಂಸೆ ನೀಡಿದ್ದಾಳೆ.
ಪುಟ್ಟ ಬಾಲಕನ ಮೇಲೆ ಹಲ್ಲೆ ನಡೆಸಿರುವ ಅಜ್ಜಿ ಮುಬೀನಾ ಎನ್ನಲಾಗಿದ್ದು, ಈ ಘಟನೆಯ ಬಗ್ಗೆ ತಿಳಿದ ಸುದ್ದಗುಂಟೆ ಪೊಲೀಸರು ಅಜ್ಜಿಯನ್ನು ಬಂಧಿಸಿದ್ದಾರೆ. ಅಜ್ಜಿಯ ಬಂಧನದೊಂದಿಗೆ ಫ್ಯಾಮಿಲಿಯ ಬಗ್ಗೆ ಕೂಡಾ ತಿಳಿದುಬಂದಿದ್ದು, ಅಪ್ಪ-ಅಮ್ಮ ಜಗಳದ ನಡುವೆ ಅಜ್ಜಿ ಮೊಮ್ಮಗನಿಗೆ ಹಿಂಸೆ ನೀಡುತ್ತಿದ್ದಳು ಎನ್ನುವ ವಿಚಾರ ತಿಳಿದುಬಂದಿದೆ.
ಬಾಲಕ ಹೆಚ್ಚು ಊಟ ಮಾಡುತ್ತಾನೆ ಎನ್ನುವ ಕಾರಣದಿಂದ ಆತನ ಮೇಲೆ ಅಜ್ಜಿ ಮನಬಂದಂತೆ ಹಲ್ಲೆ ಮಾಡಿದ್ದಳು. ಆದರೆ, ಈ ವಿಚಾರದಲ್ಲಿ ಸತ್ಯ ಬೇರೆಯೇ ಇದೆ. ಈ ಬಗ್ಗೆ ಬಾಲಕನ ತಂದೆ ಇಮ್ರಾನ್ ಪಾಷರನ್ನು ಪ್ರಶ್ನಿಸಿದರೆ, ನಿನ್ನ ಮಕ್ಕಳೊಂದಿಗೆ ಮನೆ ಖಾಲಿ ಮಾಡು ಎಂದು ಹೇಳುತ್ತಿದ್ದರು. ಈ ಬಗ್ಗೆ ಮಾತನಾಡನ ಆತ ಈ ಬಗ್ಗೆ ವಿಡಿಯೋ ಚಿತ್ರಿಸಿಕೊಂಡಿದ್ದಾನೆ. ಅಜ್ಜಿ ಮೊಮ್ಮಗನ ಮೇಲೆ ಹಲ್ಲೆ ನಡೆಸಿದ ಸಂದರ್ಭ ಮಗು ಜೋರಾಗಿ ಅಳುತ್ತಿದ್ದ, ಈ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಅಜ್ಜಿಯ ಕೈಯಿಂದ ಆ ಪುಟ್ಟ ಬಾಲಕನನ್ನು ಕಾಪಾಡಿದ್ದಾರೆ. ನಂತರ ಈ ವಿಚಾರವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ತನ್ನ ಮಗುವಿನ ಮೇಲೆ ಅಜ್ಜಿ ಇಷ್ಟೆಲ್ಲಾ ಹಲ್ಲೆ ನಡೆಸುತ್ತಿದ್ದರೂ ಕೂಡಾ ಮಗುವಿನ ತಾಯಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಂತೆ . ಮಗುವಿನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಅಜ್ಜಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.