ನವದೆಹಲಿ, ಆ. 30 (DaijiworldNews/MB) : ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಮುಂದಿನ ತಿಂಗಳು ಒಂದು ವಾರ ಕಾಲ ಬಿಜೆಪಿಯು ಸೇವಾ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಲಿದೆ.
ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನ ಸೆಪ್ಟೆಂಬರ್ 17ರಂದು ನಡೆಯಲಿದ್ದು ಇದಕ್ಕೂ ಮುನ್ನ ಸೆಪ್ಟೆಂಬರ್ 14ರಿಂದ ಸೇವಾ ಸಪ್ತಾಹ ಕಾರ್ಯಕ್ರಮ ನಡೆಯಲಿದೆ. ಈ ರ್ಕಾಕ್ರಮವು 20ರ ವರೆಗೆ ನಡೆಯಲಿದೆ. ಇನ್ನು ಈ ಕಾರ್ಯಕ್ರಮಕ್ಕೆ ಪಕ್ಷವು ಈಗಾಗಲೇ ರಾಜ್ಯ ಘಟಕಗಳ ಮುಖ್ಯಸ್ಥರಿಗೆ ಪ್ರಧಾನಿ ಮೋದಿಯವರ 70ನೇ ವರ್ಷದ ಅಂಗವಾಗಿ ಎಪ್ಪತ್ತು ಸಾಮಾಜಿಕ ಸೇವಾ ಕಾರ್ಯಕ್ರಮಗಳ ಪಟ್ಟಿಯನ್ನು ಒಳಗೊಂಡ ಸುತ್ತೋಲೆ ಕಳುಹಿಸಿದ್ದು ಇದರ ಪ್ರಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ನಡೆಸುವಂತೆ ತಿಳಿಸಲಾಗಿದೆ.
ಈ ಸುತ್ತೋಲೆ ಪ್ರಕಾರವಾಗಿ ಕೊರೊನಾ ನಿಯಮಗಳನ್ನು ಅನುಸರಿಸಿ ಈ ಕಾರ್ಯಕ್ರಮ ಮಾಡಬೇಕಾಗಿದ್ದು 70 ವಿಶೇಷ ಸಾಮರ್ಥ್ಯದ ವ್ಯಕ್ತಿಗಳಿಗೆ ಕೃತಕ ಕೈ-ಕಾಲುಗಳ ಜೋಡಣೆ, 70 ಅಂಧರಿಗೆ ಕನ್ನಡಕ ವಿತರಣೆ, 70 ಆಸ್ಪತ್ರೆಗಳ ರೋಗಿಗಳಿಗೆ ಹಾಗೂ ಬಡವರಿಗೆ ಹಣ್ಣು ವಿತರಣೆ ಕಾರ್ಯಕ್ರಮ ನಡೆಯಲಿದೆ. ಇದು ಪ್ರತಿಯೊಂದು ಘಟಕದ ವ್ಯಾಪ್ತಿಯಲ್ಲಿ ನಡೆಯಲಿದೆ.
ದೊಡ್ಡ ರಾಜ್ಯಗಳಲ್ಲಿ ಕನಿಷ್ಠ 70 ಹಾಗೂ ಸಣ್ಣ ರಾಜ್ಯಗಳ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ರಕ್ತದಾನ ಶಿಬಿರ ಆಯೋಜಿಸುವಂತೆ ಬಿಜೆಪಿ ಯುವ ಮೋರ್ಚಾಗೆ ಸೂಚಿಸಲಾಗಿದೆ. ಹಾಗೆಯೇ ಪ್ರತಿ ಬೂತ್ ಮಟ್ಟದಲ್ಲಿ 70 ಸಸಿಗಳನ್ನು ನೆಡಬೇಕು, ಪ್ರತಿ ಜಿಲ್ಲೆಯ 70 ಹಳ್ಳಿಗಳಲ್ಲಿ ಸ್ವಚ್ಛತಾ ಆಂದೋಲನ ನಡೆಸಬೇಕು ಎಂದು ತಿಳಿಸಲಾಗಿದೆ.