ಬೆಂಗಳೂರು, ಆ. 30(DaijiworldNews/HR): ಬೆಂಗಳೂರು ನಗರದಿಂದ ಮೊದಲ ರೋ ರೋ ಸೇವೆಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂದು ಚಾಲನೆ ನೀಡಿದ್ದಾರೆ.
ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತೆಲಂಗಾಣಗಳ ಕೃಷಿ ಬಳಕೆ ಕೇಂದ್ರಗಳ ನಡುವೆ ಈ ರೈಲು ಸಂಪರ್ಕವಿದ್ದು, ಇದೇ ಮೊದಲ ನೈಋತ್ಯ ರೈಲ್ವೆಯು ಆರಂಭಿಸಿರುವ ರೋ ರೋ ಸೇವೆ ಇದಾಗಿದೆ.
ಇನ್ನು ಮುಖ್ಯಮಂತ್ರಿ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ರೋ ರೋ ಸೇವೆಯಲ್ಲಿ 43 ಓಪನ್ ವ್ಯಾಗನ್ಗಳು ಇರಲಿದ್ದು, 682 ಕಿ. ಮೀ. ಮಾರ್ಗದಲ್ಲಿ ಈ ರೈಲು ಸಂಚಾರ ನಡೆಸಲಿದೆ. ಒಂದು ಬಾರಿ ರೈಲು ಸಂಚಾರ ನಡೆಸಲು 7 ದಿನ ಬೇಕಾಗಿದ್ದು, ಲಾರಿಗಳ ಗಾತ್ರದ ಆಧಾರದ ಮೇಲೆ 43ಕ್ಕೂ ಅಧಿಕ ಲಾರಿಗಳನ್ನು ರೈಲು ವ್ಯಾಗನ್ನಲ್ಲಿ ಸಾಗಿಸಬಹುದಾಗಿದೆ.
ಚಾಲನೆ ನೀಡುವ ಸಂಧರ್ಭದಲ್ಲಿ ಕೇಂದ್ರ ರೈಲ್ವೆ ರಾಜ್ಯಸಚಿವ ಸುರೇಶ್ ಅಂಗಡಿ, ಕಂದಾಯ ಸಚಿವ ಆರ್. ಅಶೋಕ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶಂಕರ್ ಗೌಡ ಪಾಟೀಲ್ ಶಾಸಕ ನಾರಾಯಣಸ್ವಾಮಿ ಉಪಸ್ಥಿತರಿದ್ದರು.