ನವದೆಹಲಿ, ಆ. 30 (DaijiworldNews/MB) : ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿರುವ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ದೊರೆಯುವ ಶಿಕ್ಷೆಯ ಪ್ರಮಾಣವನ್ನು ಸುಪ್ರೀಂ ಕೋರ್ಟ್ ಸೋಮವಾರ ಪ್ರಕಟಿಸಲಿದೆ.
ಆರು ತಿಂಗಳು ಜೈಲುಶಿಕ್ಷೆ ಅಥವಾ 2 ಸಾವಿರದವರೆಗೆ ದಂಡ ಅಥವಾ ದಂಡ ಹಾಗೂ ಜೈಲು ಶಿಕ್ಷೆ ಎರಡಕ್ಕೂ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ಗುರಿಯಾಗಬಹುದು ಎಂದು ಹೇಳಲಾಗಿದೆ.
ಸಿಜೆಐ ಎಸ್.ಎ. ಬೋಬ್ದೆ ಕಲಾಪಕ್ಕೆ ಗೈರು ಹಾಜರಾಗಿ ಐಷಾರಾಮಿ ಬೈಕ್ನಲ್ಲಿ ಹೆಲ್ಮೆಟ್ ಧರಿಸದೆ ಜಾಲಿ ರೈಡ್ ಮಾಡುತ್ತಿದ್ದಾರೆ ಎಂದು ಪ್ರಶಾಂತ್ ಟ್ವೀಟ್ನಲ್ಲಿ ನಿಂದಿಸಿದ್ದರು. ಆದರೆ ನಿಜವಾಗಿ, ಸ್ಟಾಂಡ್ ಹಾಕಿದ್ದ ಬೈಕ್ ಮೇಲೆ ಬೋಬ್ದೆ ಕುಳಿತು ಫೋಟೋ ತೆಗೆಸಿಕೊಂಡಿದ್ದರು ಎಂದು ಹೇಳಲಾಗಿದೆ.
ಈ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಟೀಕಿಸಿದ ಟ್ವೀಟ್ ವಿವಾದಕ್ಕೆ ಕಾರಣವಾಗಿದ್ದು ಕಳೆದ ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ಪ್ರಶಾಂತ್ ಭೂಷಣ್ ಅವರನ್ನು ಅಪರಾಧಿ ಎಂದು ತೀರ್ಮಾನಿಸಿ ಕ್ಷಮೆ ಕೋರುವಂತೆ ಸೂಚನೆ ನೀಡಿತ್ತು. ಆದರೆ ಪ್ರಶಾಂತ್ ಭೂಷಣ್ ಅವರು ಕ್ಷಮೆಯಾಚಿಸುವುದಿಲ್ಲ, ಯಾವುದೇ ಶಿಕ್ಷೆ ನೀಡಿದರೂ ಅನುಭವಿಸಲು ಸಿದ್ದ ಎಂದು ಹೇಳಿದ್ದರು.
ಇನ್ನು ಪ್ರಶಾಂತ್ ಭೂಷಣ್ ಪರ ಹಿರಿಯ ವಕೀಲ ರಾಜೀವ್ ಧವನ್ ಅವರು, ಪ್ರಶಾಂತ್ ಅವರು ಹತ್ಯೆ ಅಥವಾ ಸುಲಿಗೆ ಮಾಡಿರುವ ದೋಷಿಯಲ್ಲ. ಅವರಿಗೆ ಶಿಕ್ಷೆ ನೀಡುವ ತೀರ್ಪನ್ನ ಮರು ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದರು.
ನಾಳೆ ಈ ಪ್ರಕರಣದ ಶಿಕ್ಷೆಯ ಪ್ರಮಾಣವನ್ನು ಸುಪ್ರೀಂ ಕೋರ್ಟ್ ಪ್ರಕಟಿಸಲಿದೆ.