ಬೆಂಗಳೂರು, ಆ 30 (DaijiworldNews/PY): "ರಾಜ್ಯದಲ್ಲಿ ಮಾದಕ ದ್ರವ್ಯದ ದೊಡ್ಡ ಜಾಲವೇ ಪತ್ತೆಯಾಗಿದೆ. ಮಾದಕ ವ್ಯಸನಕ್ಕೆ ಅತಿ ಹೆಚ್ಚು ಬಲಿಯಾಗುವುದೇ ಯುವ ಸಮುದಾಯ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಾದಕ ವಸ್ತು ಜಾಲವನ್ನು ಮಟ್ಟ ಹಾಕಬೇಕು" ಎಂದು ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ರಾಜ್ಯದಲ್ಲಿ ಮಾದಕ ದ್ರವ್ಯದ ದೊಡ್ಡ ಜಾಲವೇ ಪತ್ತೆಯಾಗಿದೆ. ಡ್ರಗ್ ಪೆಡ್ಲರ್ಗಳ ಜೊತೆ ಕನ್ನಡ ಚಿತ್ರರಂಗದ ಕೆಲವರ ನಂಟು ಇದೆ ಎಂಬ ಮಾತು ಆಘಾತಕಾರಿ. ಮಾದಕ ವ್ಯಸನಕ್ಕೆ ಅತಿ ಹೆಚ್ಚು ಬಲಿಯಾಗುವುದೇ ಯುವ ಸಮುದಾಯ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಾದಕ ವಸ್ತು ಜಾಲವನ್ನು ಮಟ್ಟ ಹಾಕಬೇಕು" ಎಂದು ಒತ್ತಾಯಿಸಿದ್ದಾರೆ.
ಕಲಾವಿದರಿಗೆ ಡ್ರಗ್ಸ್ ತೆಗೆದುಕೊಳ್ಳುವ ಪದ್ದತಿ ಇಲ್ಲ ಎಂದು ಚಿತ್ರರಂಗದ ಕೆಲವರು ಹೇಳುತ್ತಿದ್ದರೆ, ಈ ನಡುವೆ ನಟ-ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು, ಕನ್ನಡ ಚಿತ್ರರಂಗದ ಮೂರನೇ ಪೀಳಿಗೆಯ ಹಾಗೂ ಯುವ ನಟ-ನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.