ಉತ್ತರ ಪ್ರದೇಶ, ಆ 30 (DaijiworldNews/PY): ಮಹಿಳೆಯೋರ್ವಳು ತನ್ನ ಪತಿಯ ಪಾಸ್ಪೋರ್ಟ್ ಬಳಸಿ ಪ್ರಿಯತಮನನ್ನು ಆಸ್ಟ್ರೇಲಿಯಾಕ್ಕೆ ಕರೆದುಕೊಂಡಿ ಹೋಗಿ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ದಮ್ಗರ್ಹಿ ಗ್ರಾಮದ ನಿವಾಸಿ 36 ವರ್ಷದ ಮಹಿಳೆಯೋರ್ವರು ತನ್ನ ಪತಿಯ ಪಾಸ್ ಪೋರ್ಟ್ ಬಳಸಿ ಪ್ರಿಯತಮನೊಂದಿಗೆ ಜನವರಿಯಲ್ಲಿ ಆಸ್ಟ್ರೇಲಿಯಾಕ್ಕೆ ಹೋಗಿದ್ದಳು. ಬಳಿಕ ಮಾರ್ಚ್ನಲ್ಲಿ ದೇಶಕ್ಕೆ ವಾಪಾಸ್ಸು ಬರಲು ನಿರ್ಧರಿಸಿದ್ದಳು. ಈ ವೇಳೆ ಕೊರೊನಾ ವೈರಸ್ ಇದ್ದ ಕಾರಣ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಹಾಗಾಗಿ ಇವರು ಆಗಸ್ಟ್ 24ರಂದು ದೇಶಕ್ಕೆ ವಾಪಾಸ್ಸಾಗಿದ್ದಾರೆ.
ಆದರೆ, ಈಕೆಯ ಪತಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ನನ್ನ ಪತ್ನಿಗೆ ಸ್ಥಳೀಯ ಸಂದೀಪ್ ಸಿಂಗ್ (36) ಎಂಬಾತನೊಂದಿಗೆ ಅನೈತಿಕ ಸಂಬಂಧವಿದೆ. ಅಲ್ಲದೇ, ಆಕೆ ನಕಲಿ ದಾಖಲೆಗಳನ್ನು ಉಪಯೋಗಿಸಿಕೊಂಡು ಆಸ್ಟ್ರೇಲಿಯಾಕ್ಕೆ ಹೋಗಿದ್ದಾಳೆ ಎಂದು ತಿಳಿಸಿದ್ದಾನೆ.
ಪಿಲಿಭಿತ್ನಲ್ಲಿ ನಮ್ಮ ಪೂರ್ವಜರ ಆಸ್ತಿ ಇರುವ ಕಾರಣ ಅದನ್ನು ನೋಡಿಕೊಳ್ಳು ಕಾರ್ಯವನ್ನು ಪತ್ನಿಗೆ ನೀಡಿದ್ದೇನೆ. ನಾನು ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಕಾರಣ ನಾನು ಆಗಾಗ ಬಂದು ಪತ್ನಿಯನ್ನು ಭೇಟಿ ಮಾಡುತ್ತಿದೆ. ಹೀಗೆ, ಮೇ 18ರಂದು ಪಿಲಿಭಿತ್ಗೆ ಬಂದ ಸಂದರ್ಭ ಅಲ್ಲಿ ನನ್ನ ಪತ್ನಿ ಇರಲಿಲ್ಲ. ನನಗೆ ಗಾಬರಿಯಾಯಿತು ಬಳಿಕ ಸಂದೀಪ್ ಕುಟುಂಬದವರು, ಆಕೆ ಸಂದೀಪ್ನೊಂದಿಗೆ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೆ ಎನ್ನುವ ವಿಚಾರ ತಿಳಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಕಲಿ ದಾಖಲೆಗಳನ್ನು ಬಳಸಿ ಅಂತರಾಷ್ಟ್ರೀಯ ಪ್ರಯಾಣ ಮಾಡಿದ್ದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.