ಹುಬ್ಬಳ್ಳಿ, ಆ 30 (DaijiworldNews/PY): "ಡಾರ್ಕ್ನೆಟ್ ಅಂತರ್ಜಾಲ ಸೇರಿದಂತೆ ಅಂಚೆಯ ಮೂಲಕವೂ ಗಾಂಜಾ ವ್ಯವಹಾರ ನಡೆಯುತ್ತಿರುವ ವಿಚಾರ ತಿಳಿದುಬಂದಿದ್ದು, ಪೊಲೀಸ್ ಇಲಾಖೆಯು ಇದನ್ನು ಭೇದಿಸುವಲ್ಲಿ ಸಿದ್ದರಿದ್ದಾರೆ" ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈವರೆಗೆ ಗಾಂಜಾ ಸರಬರಾಜು ಮಾಡುತ್ತಿರುವವರನ್ನು ಮಾತ್ರವೇ ನಾವು ಬಂಧಿಸುತ್ತಿದ್ದೆವು. ಈಗ ಡಾರ್ಕ್ನೆಟ್ ಅಂತರ್ಜಾಲ ಸೇರಿದಂತೆ ಅಂಚೆಯ ಮೂಲಕ ಈ ವ್ಯವಹಾರ ನಡೆಯುತ್ತಿದ್ದು, ಇಂತಹ ವ್ಯಕ್ತಿಗಳನ್ನು ಬಂಧಿಸಲು ಪೊಲೀಸ್ ಇಲಾಖೆ ತಯಾರಾಗಿದೆ" ಎಂದು ತಿಳಿಸಿದರು.
"ಕೇವಲ ಚಿತ್ರರಂಗದವರು ಮಾತ್ರವಲ್ಲದೇ ಬೇರೆ ಬೇರೆ ಕ್ಷೇತ್ರದವರು ಕೂಡಾ ಈ ಡ್ರಗ್ಸ್ ಪ್ರಭಾವಕ್ಕೆ ಒಳಗಾಗಿದ್ದಾರೆ. ಪ್ರಸ್ತುತ ನಾವು ಡ್ರಗ್ಸ್ ವ್ಯವಹಾರದ ಮೂಲವನ್ನು ಪತ್ತೆಹಚ್ಚುವ ಕಾರ್ಯವನ್ನು ಮಾಡುತ್ತಿದ್ದೇವೆ. ಕೆಲವೊಂದು ಸಿಂಥೆಟಿಕ್ ಡ್ರಗ್ಸ್ ವ್ಯವಹಾರ ಮಾಡುವ ವ್ಯಕ್ತಿಗಳನ್ನು ಎನ್ಸಿಬಿ ವಶಕ್ಕೆ ಪಡೆದುಕೊಂಡಿದೆ" ಎಂದರು.
ಇಂದ್ರಜಿತ್ ಲಂಕೇಶ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಡ್ರ"ಗ್ಸ್ ವಿಚಾರದ ಬಗ್ಗೆ ಇಂದ್ರಜಿತ್ ಲಂಕೇಶ್ ಅವರ ಏನು ಹೇಳುತ್ತಾರೆ ಎಂದು ನೋಡಬೇಕಿದೆ. ಸದ್ಯ ಅವರಿಗೆ ನೋಟಿಸ್ ನೀಡಲಾಗಿದೆ" ಎಂದು ತಿಳಿಸಿದರು.
"ಗಾಂಜಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ಕೈಗೊಳ್ಳು ಸಿಸಿಬಿ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಚಿತ್ರರಂಗ ಅಥವಾ ಯಾವುದೇ ಕ್ಷೇತ್ರವೇ ಆಗಿರಲಿ ಡ್ರಗ್ಸ್ ವ್ಯವಹಾರದ ಮಾಹಿತಿ ಕಂಡುಬಂದಲ್ಲಿ ಪ್ರಕರಣ ಬೇಧಿಸುತ್ತೇವೆ" ಎಂದರು.