ನವದೆಹಲಿ, ಆ 30 (DaijiworldNews/PY): ಜೂನ್ 15ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷಣೆಯ ನಂತರ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದ ಭಾರತೀಯ ನೌಕಾಪಡೆ, ದಕ್ಷಿಣ ಚೀನಾ ಸಮುದ್ರಕ್ಕೆ ತನ್ನ ಯುದ್ದ ನೌಕೆಯನ್ನು ಕಳುಹಿಸಿತ್ತು ಎಂದು ತಿಳಿದುಬಂದಿದೆ.
2009ರಿಂದ ಚೀನಾವು ಆ ಪ್ರದೇಶದಲ್ಲಿ ತನ್ನ ಅಸ್ತಿತ್ವನ್ನು ವಿಸ್ತರಿಸಿದ್ದು, ಭಾರತೀಯ ನೌಕಾಪಡೆಯ ಹಡಗುಗಳ ಉಪಸ್ಥಿತಿಯನ್ನು ಚೀನಾ ಆಕ್ಷೇಪಿಸಿದೆ.
ಗಾಲ್ವಾನ್ ಕಣಿವೆಯ ಸಂಘರ್ಷದ ವೇಳೆ ಭಾರತೀಯ ಸೈನಿಕರನ್ನು ಚೀನಾ ಸೇನೆ ಹತ್ಯೆಗೈದ ಕೂಡಲೇ ಭಾರತೀಯ ನೌಕಾಪಡೆಯು ತನ್ನ ಯುದ್ದನೌಕೆಯನ್ನು ದಕ್ಷಿಣ ಚೀನಾ ಸಮುದ್ರದಕ್ಕಿ ನಿಯೋಜನೆ ಮಾಡಿತ್ತು ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತೀಯ ನೌಕಾಪಡೆಯ ಯುದ್ದನೌಕೆಯನ್ನು ನಿಯೋಜನೆ ಮಾಡಿರುವುದರಿಂದ ಚೀನಾದ ನೌಕಾಪಡೆ ಹಾಗೂ ಭದ್ರತಾ ಸ್ಥಾಪನೆಯ ಮೇಲೆ ಅಪೇಕ್ಷಿತ ಪರಿಣಾಮ ಬೀರಿತು. ಏಕೆಂದರೆ, ರಾಜತಾಂತ್ರಿಕ ಮಾತುಕತೆಯ ಸಂದರ್ಭ ಆ ಪ್ರದೇಶದಲ್ಲಿ ಭಾರತದ ಯುದ್ದನೌಕೆಯನ್ನು ನಿಯೋಜನೆ ಮಾಡಿರುವ ಬಗ್ಗೆ ಚೀನಾ ಪ್ರಸ್ತಾಪ ಮಾಡಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕದ ನೌಕಾಪಡೆಯು ತನ್ನ ಯುದ್ಧನೌಕೆಗಳನ್ನು ನಿಯೋಜಿಸಿದ್ದ ಸಮಯದಲ್ಲಿ, ಅಮೆರಿಕದ ನೌಕಾಪಡೆಯೊಂದಿಗೆ ಭಾರತೀಯ ನೌಕಾಪಡೆಯು ನಿರಂತರವಾಗಿ ಸಂಪರ್ಕದಲ್ಲಿತ್ತು. ಅಲ್ಲದೇ, ಅದೇ ಪ್ರದೇಶದಲ್ಲಿರುವ ಇತರ ದೇಶಗಳ ಯುದ್ದನೌಕೆಗಳೊಂದಿಗೆ ತನ್ನ ಚಲನೆಯ ಮಾಹಿತಿಯನ್ನು ಹಂಚಿಕೊಳ್ಳುತ್ತಿತ್ತು ಎಂದು ಮೂಲಗಳು ತಿಳಿಸಿವೆ.