ನವದೆಹಲಿ, ಆ. 30(DaijiworldNews/HR): ಸೋನಿಯಾ ಗಾಂಧಿಯವರು ಪ್ರಸ್ತುತ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು,ನಾಯಕತ್ವ ವಿಚಾರವನ್ನು ಬಗೆಹರಿಸಲಿದ್ದಾರೆ ಹಾಗಾಗಿ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಆತುರವೇನಿಲ್ಲ ಎಂದು ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
ಪಕ್ಷದ ಅಧ್ಯಕ್ಷರು ಸೇರಿದಂತೆ ಸಾಂಸ್ಥಿಕ ಬದಲಾವಣೆ ಕೋರಿ ಸೋನಿಯಾ ಗಾಂಧಿಗೆ ಪತ್ರ ಬರೆದಿರುವ ಗುಂಪು ತಮ್ಮನ್ನು ಸಂಪರ್ಕಿಸಿದ್ದರೂ ತಾವು ಮಾತ್ರ ಸಹಿ ಹಾಕುತ್ತಿರಲಿಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಗಾಂಧಿ ಕುಟುಂಬದ ಆಪ್ತರಾಗಿರುವ ಸಲ್ಮಾನ್ ಖುರ್ಷಿದ್ ತಿಳಿಸಿದ್ದಾರೆ.
ಹಲವು ವರ್ಷ ಕಳೆದರೂ ಕಾಂಗ್ರೆಸ್ ಅಧಿಕಾರ ಹಿಡಿಯುವುದಿಲ್ಲ ಎಂದು ಗುಲಾಂ ನಬಿ ಆಜಾದ್ ಸೇರಿದಂತೆ 23 ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದು, ಪಕ್ಷದೊಳಗೆ ಈ ಬಗ್ಗೆ ಚರ್ಚೆ ನಡೆಯಬೇಕಾಗಿದೆ ಎಂದು ಸಲ್ಮಾನ್ ಖುರ್ಷಿದ್ ಹೇಳಿದರು.
ಕಾಂಗ್ರೆಸ್ ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಾಯಕರಾಗಿದ್ದಾರೆ. ಹಾಗಾಗಿ ಅಧ್ಯಕ್ಷರ ಆಯ್ಕೆಗೆ ಯಾವುದೇ ಆತುರವೇನಿಲ್ಲ, ಅಧ್ಯಕ್ಷರು ಆಯ್ಕೆ ಯಾವಾಗ ಆಗಬೇಕೋ ಆಗ ಆಗಲಿದೆ. ನಮಗೆ ಕಡಿಮೆ ಅವಧಿಯ ಅಧ್ಯಕ್ಷರು ಬೇಕಾಗಿಲ್ಲ, ಪೂರ್ಣ ಅವಧಿಯ ಅಧ್ಯಕ್ಷರು ಬೇಕಾಗಿದೆ ಆದರೆ, ಪೂರ್ಣ ಅವಧಿಯ ಅಧ್ಯಕ್ಷರು ಹಂಗಾಮಿ ಅಧ್ಯಕ್ಷರಾಗಿದ್ದು, ಸಾಮಾನ್ಯ ವ್ಯಕ್ತಿಗಳು ಹಂಗಾಮಿ ಅಧ್ಯಕ್ಷರಾಗಿ ಇರಲ್ಲ, ಸೋನಿಯಾ ಗಾಂಧಿ ಅನೇಕ ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.