ನವದಹೆಲಿ, ಆ. 31 (DaijiworldNews/MB) : ನಿಷೇಧಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದೀನ್ಗೆ ನೆರವಾಗುತ್ತಿದ್ದ ಆರೋಪದಲ್ಲಿ ಅಮಾನತುಗೊಂಡಿರುವ ಜಮ್ಮು ಕಾಶ್ಮೀರ ಮಾಜಿ ಪೊಲೀಸ್ ಡಿವೈಎಸ್ಪಿ ದೇವೇಂದರ್ ಸಿಂಗ್ಗೆ ಪಾಕಿಸ್ತಾನವು ವಿದೇಶ ವ್ಯವಹಾರ ಇಲಾಖೆಯಲ್ಲಿ ಸಂಪರ್ಕ ಹೊಂದಿ ಗೂಡಾಚಾರ್ಯೆ ನಡೆಸುವ ಕೆಲಸವನ್ನು ವಹಿಸಿತ್ತು. ಆತ ಪಾಕಿಸ್ತಾನ ಹೈಕಮಿಷನ್ನ ಉದ್ಯೋಗಿಯೊಬ್ಬರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯ ತನ್ನ ಆರೋಪ ಪಟ್ಟಿಯಲ್ಲಿ ತಿಳಿಸಿದೆ.
ಎನ್ಐಎ ಜಮ್ಮು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಸುಮಾರು 3,064 ಪುಟಗಳ ಆರೋಪ ಪಟ್ಟಿಯಲ್ಲಿ, ಪಾಕಿಸ್ತಾನವು ಜಮ್ಮು-ಕಾಶ್ಮೀರ ಪೊಲೀಸ್ನ ಅಪಹರಣ ತಡೆ ವಿಭಾಗದಲ್ಲಿ ಅಧಿಕಾರಿಯಾಗಿದ್ದ ದೇವೇಂದರ್ ಸಿಂಗ್ನ್ನು ಗೂಢಾಚರ್ಯೆ ಕೆಲಸಕ್ಕೆ ನೇಮಿಸಿತ್ತು. ಪಾಕ್ ಹೈಕಮಿಷನ್ನ ಉದ್ಯೋಗಿಯೊಬ್ಬರೊಂದಿಗೆ ಆತ ನಿರಂತರ ಸಂಪರ್ಕವನ್ನು ಹೊಂದಿದ್ದ. ಆದರೆ ಸಿಂಗ್ಗೆ ವಿದೇಶ ವ್ಯವಹಾರ ಇಲಾಖೆಯಲ್ಲಿ ಸಂಪರ್ಕ ಸಾಧಿಸಲು ಸಾಧ್ಯವಾಗಿರಲಿಲ್ಲ. ಈ ಉದ್ಯೋಗಿಯನ್ನು ಬಳಿಕ ಇಸ್ಲಾಮಾಬಾದ್ಗೆ ವಾಪಾಸ್ ಕಳುಹಿಸಲಾಗಿದೆ ಎಂದು ಉಲ್ಲೇಖಿಸಿದೆ.
ಇನ್ನು ಈ ಆರೋಪಪಟ್ಟಿಯಲ್ಲಿ ಸಿಂಗ್ನ್ನು ಹೊರತುಪಡಿಸಿ ಐವರು ಹಿಜ್ಬುಲ್ ಸಂಘಟನೆಯ ಸದಸ್ಯರಾದ ನವೀದ್, ಇರ್ಫಾನ್ ಅಹ್ಮದ್, ರಫಿ ಅಹ್ಮದ್ ಹಾಗೂ ಉದ್ಯಮಿ ತನ್ವೀರ್ ವಾನಿಯ ಹೆಸರು ಕೂಡಾ ಉಲ್ಲೇಖ ಮಾಡಲಾಗಿದೆ.
ಜನವರಿ 11 ರಂದು ದೇವೆಂದರ್ ಸಿಂಗ್ ಹಿಜ್ಬುಲ್ ಸಂಘಟನೆಯ ನವೀಸ್ ಹಾಗೂ ವಕೀಲ ಮೀರ್ನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಜಮ್ಮು ಕಾಶ್ಮೀರ ಪೊಲೀಸರು ಬಂಧನ ಮಾಡಿದ್ದರು.