ವಿಜಯಪುರ, ಆ 31(DaijiworldNews/HR): ಭಾರತೀಯ ಗಡಿ ಭದ್ರತಾ ಪಡೆಯ ಯೋಧ ಶಿವಾನಂದ ಜಗನ್ನಾಥ ಬಡಿಗೇರ (29) ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಾವನ್ನಪ್ಪಿದ ಘಟನೆ ಜಮ್ಮು ಕಾಶ್ಮಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಂಭವಿಸಿದೆ.
ಶಿವಾನಂದ ಮೂಲತಃ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಬಸರಕೋಡ ಗ್ರಾಮದವರಾಗಿದ್ದು, ಜಮ್ಮು ಕಾಶ್ಮಿರದ ಗಡಿ ಭದ್ರತಾ ಪಡೆಯಲ್ಲಿ ಎಲೆಕ್ಟ್ರಿಕ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದು, ಜಮ್ಮು ಕಾಶ್ಮೀರದ ಬಿಎಸ್ಎಫ್ ಹೌಸ್ ನಲ್ಲಿ ವಿದ್ಯುತ್ ದುರಸ್ತಿ ಮಾಡುವಾಗ ಈ ಘಟನೆ ಸಂಭವಿಸಿದೆ ಎಂದು ಬಿಎಸ್ಎಫ್ ಹಿರಿಯ ಅಧಿಕಾರಿಗಳು ಮೃತನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.
ಶಿವಾನಂದ ಕಳೆದ 9 ವರ್ಷಗಳ ಹಿಂದೆ ಬಿಎಸ್ಎಫ್ಗೆ ಸೇರಿದ್ದು, ಕಳೆದ ವರ್ಷ ಅವರಿಗೆ ಮದುವೆಯಾಗಿದ್ದು ಪತ್ನಿ, ತಂದೆ, ತಾಯಿ, ಮೂವರು ಸಹೋದರರು, ಸಹೋದರಿ ಇದ್ದಾರೆ. ಇವರ ಹಿರಿಯ ಸಹೋದರ ಕೂಡ ಹಿರಿಯಣ್ಣನೂ ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.