ತಿರುವನಂತಪುರಂ, ಆ. 31 (DaijiworldNews/MB) : ಕೇರಳಿಗರ ಸಾಂಪ್ರದಾಯಿಕ ಹಬ್ಬವಾದ ಓಣಂ ಅನ್ನು ಈ ವರ್ಷ ಕೊರೊನಾ ಕಾರಣದಿಂದಾಗಿ ಸರಳವಾಗಿ ಆಚರಿಸಲಾಗುತ್ತಿದ್ದು ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಮುಖ್ಯಮಂತ್ರಿ ಬಿಎಸ್ವೈ ಸೇರಿದಂತೆ ಹಲವು ಗಣ್ಯರು ಶುಭಾಷಯ ತಿಳಿಸಿದ್ದಾರೆ.
ಮಲಯಾಳಂ ಭಾಷೆಯಲ್ಲೇ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ಎಲ್ಲಾ ಮಲಯಾಳಿಗಳಿಗೆ ಓಣಂ ಶುಭಾಶಯಗಳು. ಓಣಂ ಸ್ನೇಹ ಮತ್ತು ಏಕತೆಯ ಆಚರಣೆಯಾಗಿದೆ. ನಮಗಾಗಿ ಕಷ್ಟಪಟ್ಟು ದುಡಿಯುವ ರೈತರಿಗೆ ಕೃತಜ್ಞತೆ ಸಲ್ಲಿಸಲು ಈ ಹಬ್ಬವೂ ಒಂದು ಅವಕಾಶ. ಈ ಓಣಂ ಸಂದರ್ಭದಲ್ಲಿ ಎಲ್ಲರಿಗೂ ದೀರ್ಘ, ಆರೋಗ್ಯಕರ ಜೀವನ ಮತ್ತು ಸಂತೋಷ ಲಭಿಸಲಿ ಎಂದು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನು ಕೇರಳದ ವಯನಾಡು ಸಂಸದ ರಾಹುಲ್ ಗಾಂಧಿ ಅವರು ಕೂಡಾ ಮಲಯಾಳಂ ಭಾಷೆಯಲ್ಲಿ ಟ್ವೀಟ್ ಮಾಡಿ ಇದು ಮಹಿಳೆಯರು, ಯುವಕರು ಹಾಗೂ ಇತರರಿಗೆ ಉತ್ತಮ ಸಮಯ. ಸಮಾನತೆಯು ಚಿರಾಯುವಾಗಲಿ. ಓಣಂನ ಹಬ್ಬವು ಎಲ್ಲರಿಗೂ ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ನೀಡಲಿ ಎಂದು ಶುಭಾಷಯ ತಿಳಿಸಿದ್ದಾರೆ.
ಇನ್ನು ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕೂಡಾ ಟ್ವೀಟ್ ಮಾಡಿದ್ದು, ಎಲ್ಲರಿಗೂ ಓಣಂ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ಸಂತೋಷ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ ಎಂದಿದ್ದಾರೆ.