ನವದೆಹಲಿ, ಆ 31(DaijiworldNews/HR): ಕೊರೊನಾ ಸೋಂಕು ತಗಲಿದ ಅಮಿತ್ ಶಾ ಈ ಮೊದಲು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು, ಆ ಬಳಿಕ ಕೊರೊನಾ ನೆಗೆಟಿವ್ ಬಂದ ನಂತರ ಬಿಡುಗಡೆಯಾಗಿದ್ದರು. ಆದರೆ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣದ ಕಾರಣ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಆಗಸ್ಟ್ 2ರಂದು, ಕರೊನಾ ಪಾಸಿಟಿವ್ ಬಂದಿದ್ದು, ನಂತರ ಅವರು ಮೆಡಂತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿತ್ತು. ನಂತರ ಮತ್ತೆ ಅವರಲ್ಲಿ ಆಯಾಸ ಮತ್ತು ಶರೀರದಲ್ಲಿ ನೋವು ಕಂಡುಬಂದಿದ್ದರಿಂದ ಆಗಸ್ಟ್ 18ರಂದು ಆಸ್ಪತ್ರೆಗೆ ದಾಖಲಾಗಿದ್ದರು.
ನಿನ್ನೆ ಅವರನ್ನು ಪರೀಕ್ಷೆಗೆ ಒಳಪಡಿಸಿದ್ದಾಗ ಸಂಪೂರ್ಣ ಗುಣಮುಖರಾಗಿರುವುದು ತಿಳಿದುಬಂದಿದ್ದು, ಇದೀಗ ಸಂಪೂರ್ಣ ಗುಣಮುಖರಾಗಿ ಇಂದು ಬೆಳಗ್ಗೆ ಬಿಡುಗಡೆಗೊಂಡಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.