ಯಾದಗಿರಿ, ಆ. 31 (DaijiworldNews/MB) : ಯಾದಗಿರಿಯ ಗುರುಮಠಕಲ್ ತಾಲೂಕಿನಲ್ಲಿ ಜಾನುವಾರುಗಳಲ್ಲಿ ವಿಚಿತ್ರವಾದ ಲಂಪಿ ಎಂಬ ಚರ್ಮ ರೋಗ ಕಾಣಿಸಿಕೊಂಡಿದ್ದು ಕೊರೊನಾ ಸೋಂಕಿತರು ಹಾಗೂ ಶಂಕಿತರನ್ನು ಕ್ವಾರಂಟೈನ್ ಮಾಡುವಂತೆ ಜಾನುವಾರುಗಳನ್ನು ಕೂಡಾ ಕ್ವಾರಂಟೈನ್ ಮಾಡಲಾಗಿದೆ.
ಜಾನುವಾರುಗಳಲ್ಲಿ ಕಂಡು ಬಂದ ಈ ಲಂಪಿ ಕಾಯಿಲೆ ಒಂದು ವೈರಸ್ ಆಗಿದ್ದು ಜಾನುವಾರುಗಳಿಂದ ಜಾನುವಾರುಗಳಿಗೆ ಸಾಂಕ್ರಾಮಿಕವಾಗಿ ಹರಡುತ್ತಿದೆ. ಜಾನುವಾರುಗಳು ಮೈಯೆಲ್ಲಾ ಆವರಿಸಿರುವ ಗುಳ್ಳೆಯಿಂದಾಗಿ ನರಳಾಡುತ್ತಿದ್ದು ಇದೀಗ ಪಶು ವೈದ್ಯರ ಸೂಚನೆಯಂತೆ ರೈತರು ಈಗ ಈ ಜಾನುವಾರುಗಳನ್ನು ಕ್ವಾರಂಟೈನ್ಗೆ ಒಳಪಡಿಸಿದ್ದಾರೆ. ಹಾಗೆಯೇ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತೆ ಮೇವು, ಔಷಧಿಗಳನ್ನು ನೀಡುತ್ತಿದ್ದಾರೆ.
ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ರೈತರಾದ ಪ್ರಸಾದರೆಡ್ಡಿ, ಮಹೆಬೂಬ್ ಹಾಗೂ ಸಾಬಣ್ಣರವರು, ''ಆ ರಾಸುಗಳು ನಮ್ಮ ಮನೆಯ ಸದಸ್ಯರಂತೆ ಇದೆ. ಈಗ ಅವುಗಳು ಪಡುವ ಸಂಕಷ್ಟ ನೋಡಿ ನಮಗೂ ಊಟ ಸೇರುತ್ತಿಲ್ಲ'' ಎಂದು ದುಖಿತರಾಗಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಪಶು ವೈದ್ಯರಾದ ಡಾ.ವಿಜಯಕುಮಾರ ಅವರು, ''ಲಂಪಿ ಚರ್ಮ ರೋಗವು ಸುಮಾರು 1 ಸಾವಿರ ಜಾನುವಾರುಗಳಲ್ಲಿ ಕಂಡು ಬಂದಿದ್ದು ರೋಗ ಲಕ್ಷಣ ಕಾಣಿಸಿಕೊಂಡ ರಾಸುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಚಾರವಾಗಿ ಯಾವುದೇ ಆತಂಕ ಪಡಬೇಕಾಗಿಲ್ಲ'' ಎಂದು ಹೇಳಿದ್ದಾರೆ.