ಹುಬ್ಬಳ್ಳಿ, ಆ 31(DaijiworldNews/HR): ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಾಲ್ವರು ಅಂಚೆ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಪ್ರಭಾವಕ್ಕೆ ಸ್ಯಾಂಡಲ್ ವುಡ್ ಮಾತ್ರ ಅಲ್ಲದೇ ಇತರರೂ ಭಾಗಿಯಾಗಿದ್ದಾರೆ. ಸದ್ಯ ಇದೀಗ ನಾವು ಅದರ ಮೂಲ ಜಾಲವನ್ನು ಹುಡುಕುತ್ತಿದ್ದೇವೆ. ಡ್ರಗ್ಸ್ ಯಾರಿಂದ, ಯಾರಿಗೆ, ಎಷ್ಟು ಪ್ರಮಾಣದಲ್ಲಿ ಪೂರೈಕೆ ಆಗುತ್ತಿದೆ ಎಂಬುದರ ಮಾಹಿತಿ ಕಲೆ ಹಾಕುವುದು ಕಷ್ಟವಾದರೂ ರಾಜ್ಯ ಪೊಲೀಸರು ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಜೊತೆಗೆ ವಿದೇಶದಿಂದ ಡ್ರಗ್ಸ್ ಸರಬರಾಜು ಮಾಡುವ ಹಲವು ದೇಶಗಳ ಪ್ರಜೆಗಳನ್ನು ಕೂಡ ಬಂಧಿಸಲಾಗಿದೆ ಎಂದರು.
ಇನ್ನು ಸಿಸಿಬಿ ಪೊಲೀಸರು ಲವು ಕಡೆ ದಾಳಿ ನಡೆಸಿದ್ದಾರೆ. ಕೇಂದ್ರದ ಆಯಟಿ ನಾರ್ಕೋಟಿಕ್ ವಿಭಾಗದವರು ಮಹಿಳೆ ಸಹಿತ ಕೆಲವು ಸಿಂಥೆಟಿಕ್ ಡ್ರಗ್ಸ್ ವ್ಯವಹಾರ ಮಾಡುವವರನ್ನು ಬಂಧಿಸಿದ್ದಾರೆ. ಜೊತೆಗೆ ಇಂದ್ರಜಿತ್ ಲಂಕೇಶ್ ಅವರಿಗೆ ನೋಟಿಸ್ ನೀಡಿದ್ದು, ಅವರು ಯಾವ ಮಾಹಿತಿ ಕೊಡುತ್ತಾರೆ ನೋಡಿ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸಿಸಿಬಿಯವರಿಗೆ ಹೇಳಿದ್ದೇವೆ ಎಂದಿದ್ದಾರೆ.
ಇನ್ನು ಚಿತ್ರರಂಗಕ್ಕೆ ಮಾದಕ ವಸ್ತು ಪೂರೈಕೆ ಪ್ರಕರಣದ ಪ್ರಮುಖ ಆರೋಪಿ ಅನಿಕಾಳ ಹೇಳಿಕೆಯನ್ನಾಧರಿಸಿ ಸುಮಾರು 15ಕ್ಕೂ ಅಧಿಕ ಮಂದಿಯ ನಟ-ನಟಿಯರ ಪಟ್ಟಿ ಸಿದ್ಧಪಡಿಸಲಾಗಿದ್ದು, ಮೂವರು ನಟಿಯರು, ಮೂವರು ನಟರು, ಒಬ್ಬರು ಸಂಗೀತ ನಿರ್ದೇಶಕರು ಮತ್ತು ಇತರೆ ಧಾರವಾಹಿ ಕಲಾವಿದರು ಹಾಗೂ ಗಣ್ಯರ ಮಕ್ಕಳ ಹೆಸರನ್ನು ಪಟ್ಟಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.